ಹಾವೇರಿ: ರೈತ ದೇಶದ ಬೆನ್ನೆಲುಬು ಎಂಬುದು ಜನಜನಿತ ಮಾತು. ಹಳ್ಳಿಗಳಲ್ಲಿ ರೈತರಿಗೆ ಬೆನ್ನೆಲುಬಾಗಿ ಇರುವವರು ವಿಶ್ವಕರ್ಮ ಸಮುದಾಯ ಎಂದು ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ಎಫ್ಎನ್ ಗಾಜಿಗೌಡ್ರು ತಿಳಿಸಿದರು.
ಹಾವೇರಿ ನಗರಸಭಾ ಸದಸ್ಯ ಸಂಜೀವಕುಮಾರ್ ನೀರಲಗಿ ಮಾತನಾಡಿ, ವಿಶ್ವಕರ್ಮ ಸಮಾಜ ಕುಶಲಕರ್ಮಿಗಳಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಗುರುತಿಸಿಕೊಟ್ಟ ಏಕೈಕ ಸಮಾಜ ವಿಶ್ವಕರ್ಮ. ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಅಭಿರುಚಿ, ಆಸಕ್ತಿ, ಪರಿಣತಿ ಗುರುತಿಸಿ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶಿಗ್ಗಾಂವಿಯ ವಾಸ್ತು ಶಾಸ್ತ್ರಜ್ಞ ರುದ್ರಪ್ಪ ಕಮ್ಮಾರ್ ಮಾತನಾಡಿ, ನಾನು ಜೀವನದುದ್ದಕ್ಕೂ ವಿದ್ಯಾರ್ಥಿ ಎಂಬ ಭಾವನೆ ಪ್ರತಿಯೊಬ್ಬ ಮಕ್ಕಳಲ್ಲಿ ಬಂದಾಗ ಮಾತ್ರ ಸಾಧನೆಯ ದಾರಿ ಸುಗಮವಾಗುತ್ತದೆ. ಅಂಕಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಇನ್ನೊಬ್ಬರ ಗೆಲುವನ್ನು ಸಂಭ್ರಮಿಸುವ ಭಾವನೆ ಮಕ್ಕಳಲ್ಲಿ ಮೂಡಬೇಕಾಗಿದೆ ಎಂದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನವಲಗುಂದದ ಜಗದ್ಗುರು ಅಜಾತ ನಾಗಲಿಂಗ ಮಠದ ವೀರೇಂದ್ರ ಸ್ವಾಮೀಜಿ ಮಾತನಾಡಿ, ಜೀವನ ಈಗ ವ್ಯಾಪಾರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ ಅವರಲ್ಲಿ ಧರ್ಮಪ್ರಜ್ಞೆ ಜಾಗ್ರತಗೊಳಿಸಬೇಕಿದೆ ಎಂದರು.
ನಂತರ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 75 ವಿದ್ಯಾರ್ಥಿಗಳು ಹಾಗೂ ಸಮಾಜದ 11 ನಿವೃತ್ತ ನೌಕರರನ್ನು ಗೌರವಿಸಲಾಯಿತು.ಹುಲಗೂರು ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ, ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈರಪ್ಪ ಪಂಚಾನನ, ಧಾರವಾಡ ಡಿಸಿಸಿ ಬ್ಯಾಂಕಿನ ನಿರ್ದೇಶಕ ಕೊಟ್ರೇಶಪ್ಪ ಬಸೆಗಣ್ಣಿ, ದಾನಿಗಳಾದ ಸುರೇಶ್ ಕಮ್ಮಾರ್, ಡಾ. ಪದ್ಮಾವತಿ ಪತ್ತಾರ, ಎಸ್‌ಬಿ ವಿಶ್ವ ಬ್ರಾಹ್ಮಣ, ಈರಣ್ಣ ಬೆಳವಡಿ, ವಿಶ್ವಕರ್ಮ ಸಮಾಜದ ನಿರ್ದೇಶಕ ರಾಜೇಂದ್ರ ಕುಮಾರ್ ರಿತ್ತಿ, ಬಸವರಾಜ ಬಡಿಗೇರ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ನಾಗರಾಜ ಆಚಾರ್ ಅರ್ಕಸಾಲಿ ಸ್ವಾಗತಿಸಿದರು. ಮಂಜುನಾಥ ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ್ ಬಡಿಗೇರ ವಂದಿಸಿದರು. ಚಂದ್ರಕಾಂತ ಕಮ್ಮಾರ, ಶಶಿಧರ ಕಮ್ಮಾರ, ರಾಮಕೃಷ್ಣ ಬಡಿಗೇರ ಹಾಗೂ ಮೌನೇಶ ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು.