ವಿಶ್ವಕರ್ಮರಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿದೆ ಕಾಳಿಕಾಂಬೆ ದೇಗುಲ: ಶಂಕರಾತ್ಮನಂದ ಶ್ರೀ

KannadaprabhaNewsNetwork |  
Published : Oct 26, 2026, 01:30 AM IST
ನರಸಿಂಹರಾಜಪುರ ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ  ಶಿರಗಳಲೆ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ನಿಧಿ ಕುಂಭ ಪ್ರತಿಷ್ಠಾಪನೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಮಾತನಾಡಿದರು.ಸಭೆಯಲ್ಲಿ ವಡ್ಡನಾಳ್ ಸಾವಿತ್ರಿ ಪೀಠದ ವಿಶ್ವಕರ್ಮ ಮಹಾ ಸಂಸ್ಥಾನದ   ಅಷ್ಠೋತ್ತರ ಶತ ಶ್ರೀ ಶಂಕರಾತ್ಮನಂದ ಸರಸ್ವತೀ ಮಹಾ ಸ್ವಾಮೀಜಿಗಳು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರಶಿರಗಳಲೆ ಕಾಳಿಕಾಂಬ ದೇವಸ್ಥಾನ ಕೇವಲ ವಿಶ್ವ ಕರ್ಮ ಸಮಾಜದವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಮಾಜ ದವರಿಗೂ ಸೇರಿದ ದೇಗುಲ ಎಂದು ಚನ್ನಗಿರಿ ತಾಲೂಕಿನ ವಡ್ಡನಾಳ್ ಸಾವಿತ್ರಿ ಪೀಠದ ವಿಶ್ವ ಕರ್ಮ ಮಹಾ ಸಂಸ್ಥಾನದ ಅಷ್ಟೋತ್ತರ ಶತ ಶ್ರೀ ಶಂಕರಾತ್ಮನಂದ ಸರಸ್ವತೀ ಮಹಾ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

- ಶಿರಗಳಲೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಿಧಿ ಕುಂಭ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಿರಗಳಲೆ ಕಾಳಿಕಾಂಬ ದೇವಸ್ಥಾನ ಕೇವಲ ವಿಶ್ವ ಕರ್ಮ ಸಮಾಜದವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಮಾಜ ದವರಿಗೂ ಸೇರಿದ ದೇಗುಲ ಎಂದು ಚನ್ನಗಿರಿ ತಾಲೂಕಿನ ವಡ್ಡನಾಳ್ ಸಾವಿತ್ರಿ ಪೀಠದ ವಿಶ್ವ ಕರ್ಮ ಮಹಾ ಸಂಸ್ಥಾನದ ಅಷ್ಟೋತ್ತರ ಶತ ಶ್ರೀ ಶಂಕರಾತ್ಮನಂದ ಸರಸ್ವತೀ ಮಹಾ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ಭಾನುವಾರ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಪಟ್ಟಣದ ಹಳೇ ಮಂಡಗದ್ದೆ ರಸ್ತೆಯಲ್ಲಿರುವ ಶ್ರೀ ಶಿರಗಳಲೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮಡಬೂರು ವೇ.ಬ್ರ. ಸುಬ್ರಮಣ್ಯ ಹೊಳ್ಳ ನೇತೃತ್ವದಲ್ಲಿ ನಡೆದ ನಿಧಿ ಕುಂಭ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾಳಿಕಾಂಬ ದೇವಿ ಮೂಲ ಪಾರ್ವತಿ. ಈ ಕಾಳಿಕಾಂಬ ದೇವಸ್ಥಾನಕ್ಕೆ 1 ಸಾವಿರ ವರ್ಷದ ಇತಿಹಾಸವಿದೆ. ದೇವಾಲಯ ಸಮಿತಿಯವರು ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಲ್ಲಿ ನೂತನ ದೇವಸ್ಥಾನ ಕಟ್ಟಿಸಲಿದ್ದು ಈ ಜೀರ್ಣೋ ದ್ದಾರಕ್ಕೆ ವಿಶ್ವ ಕರ್ಮ ಸಮಾಜದ ಎಲ್ಲರೂ ಕೈ ಜೋಡಿಸಬೇಕು.ಯಾವುದೇ ಸಮಾಜ ಬೆಳೆಯಬೇಕಾದರೆ ಧಾರ್ಮಿಕ ಮಾರ್ಗದರ್ಶನ ಅಗತ್ಯ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಮಾತನಾಡಿ ವಿಶ್ವ ಕರ್ಮ ಸಮಾಜ ಬಿಟ್ಟು ಯಾರೂ ಇರಲು ಸಾದ್ಯವಿಲ್ಲ. ಸಣ್ಣ ಮನೆಯಾಗಲಿ, ದೊಡ್ಡ ಮನೆಯಾಗಲಿ, ದೇವಸ್ಥಾನದ ಶಿಲ್ಪ ಕಲೆಯಾಗಲಿ ಎಲ್ಲದಕ್ಕೂ ವಿಶ್ವ ಕರ್ಮರೇ ಬೇಕು. ವಿಶ್ವ ಕರ್ಮರು ನಿಮ್ಮ ವೃತ್ತಿ ಪ್ರೀತಿಸಬೇಕು.ಅಭಿಮಾನ ಬೆಳೆಸಿಕೊಳ್ಳಬೇಕು.ನಿಮ್ಮ ಮಕ್ಕಳು ಎಷ್ಟೇ ಶಿಕ್ಷಣವಂತರಾದರೂ ನಿಮ್ಮ ವೃತ್ತಿಯನ್ನು ಕಲಿಸಬೇಕು.ವಸು ದೈವ ಕುಟುಂಭ ಎಂಬಂತೆ ಎಲ್ಲಾ ವಿಶ್ವ ಕರ್ಮರು ಸಂಘಟಿತರಾಗಬೇಕು. ಕಾಳಿಕಾಂಬ ದೇವಿ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಬೇಕು.ನಂಬಿಕೆ, ಶ್ರದ್ದೆ ಇದ್ದರೆ ಮುಂದೆ ನಿಮ್ಮ ಕಾಳಿಕಾಂಬಾ ದೇವಾಲಯವು ಯಾವುದೇ ವಿಘ್ನವಿಲ್ಲದೆ ನಿರ್ಮಾಣಗೊಳ್ಳಲಿದೆ. ದೇವರ ಜೊತೆ ನಿಮ್ಮ ಸಮಾಜದ ಗುರುಗಳನ್ನು ಮುಂದೆ ಇಟ್ಟುಕೊಂಡು ಹೋದರೆ ಯಶಸ್ಸುಗಳಿಸಲು ಸಾದ್ಯ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬೇಲೂರು, ಹಳೇಬೀಡು, ಶೃಂಗೇರಿ ಸೇರಿದಂತೆ ರಾಜ್ಯದ, ದೇಶದ ಹಲವಾರು ದೇವಸ್ಥಾನಗಳ ಶಿಲ್ಪ ಕಲೆ ವಿಶ್ವಕರ್ಮರ ಕೈಯಿಂದ ಮೂಡಿಬಂದಿದೆ. ವಿಶ್ವ ಕರ್ಮರು ಹುಟ್ಟುವಾಗಲೇ ಶಿಲ್ಪಿಗಳಾಗಿದ್ದಾರೆ. ಈಗ ಶಿಲ್ಪ ಕಲೆ ಜೊತೆಗೆ ವಿಶ್ವ ಕರ್ಮರು ಬೇರೆ, ಬೇರೆ ಹುದ್ದೆಗೆ ಹೋಗಿ ಯಶಸ್ಸು ಕಂಡಿದ್ದಾರೆ. ರಾಜ್ಯ ಸರ್ಕಾರ ವಿಶ್ವ ಕರ್ಮರ ಅಭಿವೃದ್ಧಿಗೆ ವಿಶ್ವ ಕರ್ಮ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದೆ. ಈಗಾಗಲೇ ನಾನು ಬಿ.ಕಣಬೂರು ವಿಶ್ವ ಕರ್ಮ ಸಮುದಾಯ ಭವನ, ಎನ್.ಆರ್. ಪುರ, ಕೊಪ್ಪ ಸಮುದಾಯ ಭವನಕ್ಕೆ ಹಣ ನೀಡಿದ್ದೇನೆ.ನಿಮ್ಮ ಕೆಲಸವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೂ ದಾನ ನೀಡಿದ ಉದ್ಯಮಿ ಪಿ.ಆರ್.ಸುಕುಮಾರ್ ಹಾಗೂ ವಿಶ್ವ ಕರ್ಮ ಸಮಾಜದ ಕುಶಲ ಕರ್ಮಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನಾ ಚಂಡೆ, ವಾದ್ಯ, ಮಹಿಳೆಯರ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಶ್ರೀ ಶಂಕರಾತ್ಮನಂದ ಸರಸ್ವತೀ ಮಹಾ ಸ್ವಾಮೀಜಿಯನ್ನು ದೇವಸ್ಥಾನಕ್ಕೆ ಕರೆ ತರಲಾಯಿತು.

ಅತಿಥಿಯಾಗಿದ್ದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ ವಿಶ್ವ ಕರ್ಮ ಸಮಾಜ ಸಂಖ್ಯೆಯಲ್ಲಿ ಸಣ್ಣ ಸಮಾಜ ವಾದರೂ ಬೌದ್ಧಿಕವಾಗಿ ಶ್ರೀಮಂತ ಸಮಾಜ. ನಾನು ಸಚಿವನಾಗಿದ್ದಾಗ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟು ಕಾಳಿ ಕಾಂಬಾ ದೇವಸ್ಥಾನಕ್ಕೆ ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದೆ. ವಿಶ್ವ ಕರ್ಮ ಸಮಾಜ ಪ್ರಪಂಚಕ್ಕೇ ಮಾರ್ಗದರ್ಶನ ಮಾಡುವ ಸಮಾಜ. ಆದರೆ, ವಿಶ್ವ ಕರ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಕರ್ಮ ಯೋಜನೆ ಜಾರಿಗೆ ತಂದು ₹13 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.ಈ ಹಣ ವಿಶ್ವ ಕರ್ಮ ನಿಗಮದ ಮೂಲಕ ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಎಸ್ ಶೆಟ್ಟಿ, ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಂಘದ ತಾಲೂಕು ಅಧ್ಯಕ್ಷ ರಾಜೇಶ್ ಆಚಾರ್, ಚಿಕ್ಕಮಗಳೂರು ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್,ತರೀಕೆರೆ ಸಂಘದ ಅಧ್ಯಕ್ಷ ಸುರೇಶ ಆಚಾರ್ಯ,ಸತೀಶ್ ಆಚಾರ್ , ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್, ಅರುಣ ಆಚಾರ್ ಡಿ.ನಟರಾಜ . ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮೆಲ್ಲರ ಜವಾಬ್ದಾರಿ
ಕಾಡಾನೆ ಹಾವಳಿ ತಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ