2 ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ

KannadaprabhaNewsNetwork |  
Published : Oct 26, 2026, 01:30 AM IST
25ಕೆಪಿಎಸ್ಎನ್ಡಿ02: | Kannada Prabha

ಸಾರಾಂಶ

ನಗರದ ಸಹನಾ ಆಸ್ಪತ್ರೆಯಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದ್ದು, ವೈದ್ಯಕೀಯ ಪ್ರಪಂಚದ ವಿಸ್ಮಯವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಡಾ.ಕೆ.ಶಿವರಾಜ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಸಹನಾ ಆಸ್ಪತ್ರೆಯಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದ್ದು, ವೈದ್ಯಕೀಯ ಪ್ರಪಂಚದ ವಿಸ್ಮಯವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಡಾ.ಕೆ.ಶಿವರಾಜ ತಿಳಿಸಿದ್ದಾರೆ.

ಅವರು ಈ ಕುರಿತು ಹೇಳಿಕೆ ನೀಡಿ, ಮಸ್ಕಿ ತಾಲೂಕಿನ ಇರಕಲ್ಗಡ ಗ್ರಾಮದ ಎರಡು ತಿಂಗಳ ಗಂಡು ಮಗುವಿನ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿತ್ತು. ಮಗುವಿಗೆ ಪದೇಪದೇ ವಾಂತಿಯಾಗುತ್ತಿತ್ತು. ಮಗುವಿನ ಬೆಳವಣಿಗೆಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಈ ಸಮಸ್ಯೆಗಳಿಗಾಗಿ ಮಗುವನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಪ್ರಾಥಮಿಕ ತಪಾಸಣೆಯಲ್ಲಿ ಹೊಟ್ಟೆ ದೊಡ್ಡದಾಗಿರುವುದು, ಮಗುವಿನ ತೂಕ, ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದವು.

ಹೆಚ್ಚಿನ ಪರೀಕ್ಷೆಗಳಿಗಾಗಿ ಮಗುವಿನ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದಾಗ, ಹೊಟ್ಟೆಯೊಳಗೆ ಗಡ್ಡೆಯಂತಹ ಒಂದು ರಚನೆ ಇರುವುದು ಕಂಡುಬಂತು. ನಂತರ ಡಾ.ಶಿವರಾಜ ಪಾಟೀಲ್ ಮತ್ತು ರೇಡಿಯಾಲಜಿಸ್ಟ್ ಡಾ.ವಿವೇಕ್ ಜೀರಂಕಳಿ ಅವರು ಹೆಚ್ಚಿನ ಪರಿಶೀಲನೆ ನಡೆಸಿದಾಗ, ಆ ರಚನೆಯು ಸಾಮಾನ್ಯ ಗಡ್ಡೆಯಂತಿರದೆ ಭ್ರೂಣ ಹೋಲುವ ಆಕೃತಿ ಹೊಂದಿರುವುದು ಗಮನಕ್ಕೆ ಬಂತು. ವಿಶೇಷ ಚಿತ್ರಣ ಪರೀಕ್ಷೆ ಮತ್ತು ಮರುರಚನಾ ತಂತ್ರಜ್ಞಾನದ ನೆರವಿನಿಂದ ಅದರ ಸ್ವರೂಪ ಇನ್ನಷ್ಟು ಸ್ಪಷ್ಟವಾಗಿ ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಫೀಟಸ್ ಇನ್ ಫೀಟು ಎಂದು ಕರೆಯಾಗುತ್ತದೆ. 50 ಲಕ್ಷಕ್ಕೆ 1 ಇಂತಹ ಮಗು ಹುಟ್ಟುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಭಾರತದಲ್ಲಿ ವೈದ್ಯಕೀಯ ಜರ್ನಲ್‌ಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ ಇದು 230 ಮಾತ್ರ. ಕರ್ನಾಟಕದಲ್ಲಿ ಇದು 3ನೇ ಅಪರೂಪದ ಪ್ರಕರಣ. ಹೆಚ್ಚಿನ ತಜ್ಞರ ಮೌಲ್ಯಮಾಪನ ಮತ್ತು ಮುಂದಿನ ಚಿಕಿತ್ಸೆಗೆ ಮಗುವನ್ನು ಹೆಚ್ಚಿನ ಸೌಲಭ್ಯವಿರುವ ಬಳ್ಳಾರಿಯ ವಿಮ್ಸ್ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮೆಲ್ಲರ ಜವಾಬ್ದಾರಿ
ಕಾಡಾನೆ ಹಾವಳಿ ತಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ