ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಬೇಕಿದೆ: ಎರ್ರಿಸ್ವಾಮಿ

KannadaprabhaNewsNetwork |  
Published : Nov 02, 2026, 03:30 AM IST
1ಎಂಡಿಜಿ1, ಮುಂಡರಗಿಯ ಪುರಸಭೆ ಪಕ್ಕದ ಪೊಲೀಸ್ ಪರೇಡ ಮೈದಾನದಲ್ಲಿ ಭಾನುವಾರ ಜರುಗಿದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.    | Kannada Prabha

ಸಾರಾಂಶ

ನಾವು ಕನ್ನಡಿಗರು ಪರಭಾಷಿಕರೊಂದಿಗೆ ಅವರ ಭಾಷೆಗಳಲ್ಲಿ ಮಾತನಾಡದೇ ಕನ್ನಡದಲ್ಲಿಯೇ ಅವರೊಂದಿಗೆ ವ್ಯವಹರಿಸಿ, ಮಾತುಕತೆಗಳನ್ನು ನಡೆಸಲು ಪ್ರಯತ್ನಿಸಿ, ಅವರಿಗೆ ಕನ್ನಡ ಕಲಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ನಾವು ಕನ್ನಡಿಗರು ಪರಭಾಷಿಕರೊಂದಿಗೆ ಅವರ ಭಾಷೆಗಳಲ್ಲಿ ಮಾತನಾಡದೇ ಕನ್ನಡದಲ್ಲಿಯೇ ಅವರೊಂದಿಗೆ ವ್ಯವಹರಿಸಿ, ಮಾತುಕತೆಗಳನ್ನು ನಡೆಸಲು ಪ್ರಯತ್ನಿಸಿ, ಅವರಿಗೆ ಕನ್ನಡ ಕಲಿಸಬೇಕಿದೆ ಎಂದು ತಹಸೀಲ್ದಾರ್ ಎರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ತಾಲೂಕಾಡಳಿತದಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಬಹುಭಾಷಾ ಪಂಡಿತರ ಬೀಡಾಗಿರುವುದು ಪರಭಾಷಿಕರಿಗೆ ಸ್ವರ್ಗವಾಗಿದೆ. ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ಪರಭಾಷಿಕರು ನೆಲೆಸಿದ್ದರೂ ಸಹ ಕನ್ನಡ ಭಾಷೆ ಕಲಿಯುವ ಗೋಜಿಗೆ ಹೋಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ದುರಂತವೆಂದರೆ ಕನ್ನಡಿಗರೇ ಅವರ ಭಾಷೆಯಲ್ಲಿ ಮಾತನಾಡಿ ಅವರೊಂದಿಗೆ ವ್ಯವಹರಿಸತ್ತಾ ಕನ್ನಡವನ್ನು ಮೂಲೆಗುಂಪು ಮಾಡುತ್ತಿರುವುದು ಬಹಿರಂಗ ಸತ್ಯವಾಗಿದೆ. ಕನ್ನಡಿಗರು ನಮ್ಮ ಭಾಷಾಭಿಮಾನವನ್ನು ಎಂದಿಗೂ ಬಿಟ್ಟು ಕೊಡಬಾರದು.

ಕಳೆದ 71 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಕಷ್ಟು ಶ್ರೀಮಂತವಾಗಿದೆ. ಜಗತ್ತಿನಲ್ಲಿ ಕೋಟ್ಯಾಂತರ ಜನತೆ ಮಾತನಾಡುವ ಭಾಷೆ ಕನ್ನಡ. ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾಗುವ ಭಾಷೆಗಳಲ್ಲಿಯೂ ಒಂದಾಗಿದೆ.ಭಾರತದಲ್ಲಿ ಅತೀ ಹೆಚ್ಚು ಅಂದರೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಸಾಹಿತ್ಯ ಕನ್ನಡ ಸಾಹಿತ್ಯ. ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಯೂ ಕನ್ನಡ. ಕನ್ನಡ ಭಾಷೆಯನ್ನು ಅಧ್ಯಯನ ಮಾಡುವುದಕ್ಕಾಗಿಯೇ ಇಲ್ಲೊಂದು ಕನ್ನಡ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ. ಕನ್ನಡ ಜಾನಪದಗಳ ಅಧ್ಯಯನಕ್ಕಾಗಿ ಇಲ್ಲೊಂದು ಜನಪದ ವಿಶ್ವವಿದ್ಯಾಲವಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಸರ್ಕಾರ ಶ್ರಮಿಸಿ ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದೆ. ಕನ್ನಡದ ಬಗ್ಗೆ ತಾತ್ಸಾರ ಮನೋಭಾವನೆ ತಾಳದೇ ಕನ್ನಡವೇ ನನ್ನ ಉಸಿರು ಎಂಬುವ ಭಾವನೆಯನ್ನು ಕನ್ನಡಿಗರೆಲ್ಲರಲ್ಲಿಯೂ ಮೂಡಿಸೋಣ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಸಾಧನೆ ತೋರಿದ ಮುಂಡರಗಿ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ತಾಲೂಕಾ ಆಡಳಿತದ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ, ತಾಪಂ ಇಒ ವಿಜಯಕುಮಾರ ಬೆಣ್ಣಿ, ಸಮಾಜ ಕಲ್ಯಾಣಾಧಿಕಾರಿ ಉದಯಕುಮಾರ ಯಲಿವಾಳ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ, ಸಾಮಾಜಿಕ ಅರಣ್ಯಾಧಿಕಾರಿ ಸುನಿತಾ, ಲೋಕೊಪಯೋಗಿ ಇಲಾಖೆ ಅಧಿಕಾರಿ ನಾಗೇಂದ್ರ ಪಟ್ಟಣಶೆಟ್ಟಿ, ಕೃಷಿ ಅಧಿಕಾರಿ ಪ್ರಾಣೇಶ ತೋಟಗಾರಿ ಅಧಿಕಾರಿ ತಾಂಬೋಟಿ, ಪಶು ಇಲಾಖೆ ಅಧಿಕಾರಿ ಡಾ. ಎಸ್.ವಿ. ತಿಗರಿಮಠ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ತಾಲೂಕಿನ ವಿವಿಧ ಶಾಲೆಗಳ ಮಕ್ಕ‍ಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಿಇಒ ಗಂಗಾಧರ ಅಣ್ಣೀಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹನಮರಡ್ಡಿ ಇಟಗಿ, ಎಸ್.ಎಸ್. ಇಟಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ
ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಆದ್ಯತೆ ಸಿಗಲಿ