ಕಸಾಪದಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕಾರ್ಯವಾಗಲಿ: ನಾಗರಳ್ಳಿ

KannadaprabhaNewsNetwork |  
Published : Oct 26, 2026, 03:30 AM IST
ಕಾರ್ಯಕ್ರಮವನ್ನು ವಿಶ್ರಾಂತ ಡಿಡಿಪಿಐ ಎ.ಎನ್. ನಾಗರಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮುಂಡರಗಿ ತಾಲೂಕು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಫಲವತ್ತಾದ ಭೂಮಿ. ಹಿರಿಯ ಸಾಹಿತಿಗಳನ್ನು ಗುರುತಿಸುವುದರ ಜೊತೆಗೆ, ಸಾಹಿತ್ಯ ಪರಿಷತ್ತು ಶಾಲಾ-ಕಾಲೇಜು ಮಟ್ಟದಲ್ಲಿ ಮಕ್ಕಳಿಗಾಗಿ ಕಥೆ, ಕವನ ಹಾಗೂ ನಾಟಕ ರಚನೆಯ ಕಮ್ಮಟ ಏರ್ಪಡಿಸಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ಮುಂಡರಗಿ ತಾಲೂಕು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಫಲವತ್ತಾದ ಭೂಮಿ. ಹಿರಿಯ ಸಾಹಿತಿಗಳನ್ನು ಗುರುತಿಸುವುದರ ಜೊತೆಗೆ, ಸಾಹಿತ್ಯ ಪರಿಷತ್ತು ಶಾಲಾ-ಕಾಲೇಜು ಮಟ್ಟದಲ್ಲಿ ಮಕ್ಕಳಿಗಾಗಿ ಕಥೆ, ಕವನ ಹಾಗೂ ನಾಟಕ ರಚನೆಯ ಕಮ್ಮಟ ಏರ್ಪಡಿಸಬೇಕು. ಆ ಮೂಲಕ ಮುಂದಿನ ಪೀಳಿಗೆಯಲ್ಲಿ ಹೊಸ ಸಾಹಿತಿಗಳನ್ನು ರೂಪಿಸುವ ಕೆಲಸವಾಗಬೇಕು ಎಂದು ವಿಶ್ರಾಂತ ಡಿಡಿಪಿಐ ಎನ್. ಎನ್. ನಾಗರಳ್ಳಿ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲರ ಸಾಹಿತ್ಯ ಅವಲೋಕನ ಹಾಗೂ ಸಂಸಾರ ಯೋಗಿನಿ ಹೇಮರಡ್ಡಿ ಮಲ್ಲಮ್ಮ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಪ್ರೊ. ಆರ್.ಎಲ್. ಪೊಲೀಸ್ ಪಾಟೀಲರ ಸತತ ಪರಿಶ್ರಮದಿಂದ ಹೇಮರಡ್ಡಿ ಮಲ್ಲಮ್ಮನವರ ಸತ್ಯ ಘಟನೆಗಳನ್ನು ಆಧರಿಸಿದ ಕೃತಿ ಇಂದು ಲೋಕಾರ್ಪಣೆಗೊಂಡಿರುವುದು ಶ್ಲಾಘನೀಯ ಎಂದರು.

ಸಂಸಾರ ಯೋಗಿನಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಕೃತಿ ಲೋಕಾರ್ಪಣೆಗೊಳಿಸಿ ಗದಗ ಪಿಪಿಜಿ ಕಾಲೇಜಿನ ಪ್ರಾ. ಡಾ. ರಾಜಶೇಖರ ದಾನರಡ್ಡಿ ಮಾತನಾಡಿ, ಅಕ್ಕಮಹಾದೇವಿ ಸಂಸಾರ ತ್ಯಜಿಸಿ ಚೆನ್ನಮಲ್ಲಿಕಾರ್ಜುನನ ಬಳಿಗೆ ಹೋದರೆ, ಹೇಮರಡ್ಡಿ ಮಲ್ಲಮ್ಮ ತನ್ನ ಸಂಸಾರದಲ್ಲಿದ್ದುಕೊಂಡೇ, ನಿಷ್ಠೆಯ ಕಾಯಕ-ಭಕ್ತಿಯಿಂದ ಚೆನ್ನಮಲ್ಲಿಕಾರ್ಜುನನ್ನೇ ತನ್ನ ಮನೆಗೆ ಬರುವಂತೆ ಮಾಡಿಕೊಂಡ ಮಹಾನ್ ಸಾಧಕಿ. ಸಂಸಾರವನ್ನು ತ್ಯಜಿಸದೆ, ಸಂಸಾರದಲ್ಲಿದ್ದುಕೊಂಡೇ ಎಲ್ಲವನ್ನೂ ಸಾಧಿಸಿ ದೈವತ್ವಕ್ಕೇರಿದ ಆದರ್ಶವಾಗಿದ್ದರು. ಮಲ್ಲಮ್ಮ ಯಾವುದೇ ವಚನಗಳನ್ನು ಬರೆಯದಿದ್ದರೂ, ಅವುಗಳಿಗಿಂತ ಮಿಗಿಲಾಗಿ ತನ್ನ ಇಡೀ ಜೀವನವನ್ನೇ ಶರಣ ತತ್ವದಂತೆ ಬದುಕಿ ತೋರಿಸಿದಳು. ಕಷ್ಟಗಳು ಬಂದಾಗ ಧೃತಿಗೆಡದೆ ಸಮಾಜ ಕಲ್ಯಾಣಕ್ಕಾಗಿ ಬದುಕಿದ ಆಕೆಯ ಆದರ್ಶ ಇಂದಿನ ಸಮಾಜಕ್ಕೆ ದಾರಿದೀಪವಾಗಬೇಕು ಎಂದರು.

ಮುಳಗುಂದ ಸರ್ಕಾರಿ ಪದವೀ ಕಾಲೇಜಿನ ಪ್ರಾ.ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ಅಳಿಸಲಾಗದ ಲಿಪಿಯ ಮೂಲಕ ಲೇಖಕ ಸದಾ ಚಿರಂಜೀವಿಯಾಗಿರುತ್ತಾನೆ ಎಂದರು.

ಸಾನಿಧ್ಯ ವಹಿಸಿ ಜ.ನಾಡೋಜ ಡಾ. ಅನ್ನದಾನೀಶ್ವರ‌ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಎಂದಿಗೂ ಸಾಯುವುದಿಲ್ಲ, ಸಾಹಿತ್ಯವೆಂದರೆ ನಿರಂತರ ಜೀವಂತವಾಗಿರುವ ಶಕ್ತಿ. ಅದು ಜನರ ಬದುಕಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸಾಹಿತ್ಯ ಭವನದಲ್ಲಿ ನಿರಂತರ ಚಟುವಟಿಕೆಗಳು ನಡೆದಿರುವುದನ್ನು ನೋಡಿದರೆ ಶ್ರೀಮಠದಿಂದ ಜಮೀನುದಾನ ಮಾಡಿದ್ದು ಸಾರ್ಥಕವಾಯಿತು ಎಂದರು.

ಸಾಹಿತಿ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ‌ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿದ್ದರು. ಆರ್.ವೈ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಂಚಿನಾಳ, ಎ.ಬಿ. ಹಿರೇಮಠ, ಎಸ್.ಬಿ. ಕರಿಭರಮಗೌಡ್ರ, ಡಾ. ನಿಂಗು ಸೊಲಗಿ, ಡಾ.ವಿ.ಕೆ. ಸಂಕನಗೌಡ್ರ, ವೀರನಗೌಡ ಗುಡದಪ್ಪನವರ, ಪ್ರಭು ಸೊಪ್ಪಿನ, ನಾಗೇಶ ಹುಬ್ಬಳ್ಳಿ, ಸಿ.ಎಸ್. ಅರಸನಾಳ, ಸಿ.ಕೆ. ಗಣಪ್ಪನವರ, ಕೆ.ಕೆ. ಬಿಳಿಮಗ್ಗದ, ಎಸ್.ಸಿ. ಹರ್ತಿ, ಕಾಶೀನಾಥ ಶಿರಬಡಗಿ, ವಿ.ಎಸ್. ಪಾಟೀಲ, ನಾಗರಾಜ ಹಳ್ಳಿಕೇರಿ, ಸಿ.ವಿ. ಪಾಟೀಲ, ಎಸ್.ಜಿ. ಕಡ್ಡಿ, ವಿ.ಸಿ. ಉಳ್ಳಾಗಡ್ಡಿ, ಎಂ.ಎಸ್. ಶೀರನಹಳ್ಳಿ, ಎಸ್.ಎಸ್. ಮಠ ಸೇರಿದಂತೆ ಅನೇಕರಿದ್ದರು. ಕಸಾಪ ಗೌ.ಕಾರ್ಯದರ್ಶಿ ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ಸ್ವಾಗತಿಸಿ, ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿ, ಲತಾ ಕಡ್ಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್