ಕುರುಗೋಡು: ಶೋಷಿತ ವರ್ಗಕ್ಕೆ ಜೀವನ ಕಟ್ಟಿಕೊಳ್ಳಲು ನೆಲೆಗಟ್ಟು ಕಲ್ಪಿಸಿದ್ದು 12ನೇ ಶತಮಾನದ ಶರಣರ ಕಾಯಕತತ್ವ ಎಂದು ಸಹಾಯಕ ಪ್ರಧ್ಯಾಪಕ ತಿಪ್ಪೇರುದ್ರ ಸಂಡೂರು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಸಮಾನತೆಯ ತತ್ವ ಸಾರಿದ ವಚನಕಾರರು ದೇವರು ಮತ್ತು ಬೆವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಂಬಿದ್ದರು ಎಂದರು.
ಬಡಿದು ಬಾಳುವವರ ಮಧ್ಯದಲ್ಲಿ ದುಡಿದು ಬಾಳುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜಕ್ಕೆ ಭಾರವಾಗದೆ ವೃತ್ತಿ ಕೌಶಲ್ಯ ಮೈಗೂಡಿಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವುದು ಕಾಯಕ ತತ್ವದ ವಚನಕಾರರ ದ್ರವ್ಯವಾಗಿತ್ತು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿರಂಜನ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಕಾಯಕ ಮತ್ತು ಕೆಲಸಕ್ಕೆ ವ್ಯತ್ಯಾಸವಿದೆ. ಹಣ ಪಡೆದು ನಿಗದಿನ ಅವಧಿವರೆಗೆ ಮಾಡುವುದು ಕೆಲಸ. ಫಲಾಪೇಕ್ಷೆ ಇಲ್ಲದೆ ದೇವರ ಚಿಂತನೆಗಳೊಂದಿಗೆ ಸೇವೆ ಮಾಡುವುದು ಕಾಯಕವಾಗಿದೆ. ಕಾಯಕ ದಾಸೋಹ ತತ್ವ ರೂಢಿಸುತ್ತದೆ ಎಂದರು.
ಯಲ್ಲಾಪುರ ಗುರುಲಿಂಗೇಶ್ವರ ಭಜನಾ ಮಂಡಳಿಯವರು ಭಜನಾಪದ ಹಾಡಿ ಭಕ್ತಿರಸದಲ್ಲಿ ಮಿಂದೇಳುವಂತೆ ಮಾಡಿದರು.