ಶರಣರ ನಡೆ ಅನುಸರಿಸಿದರೆ ಭ್ರಷ್ಟಾಚಾರ ಮುಕ್ತ ಸಮಾಜ ಸಾಧ್ಯ

KannadaprabhaNewsNetwork |  
Published : Sep 28, 2026, 02:00 AM IST
ಕಂಪ್ಲಿಯ ಗುರುಮಠದಲ್ಲಿ ನಡೆದ 266ನೇ ಹುಣ್ಣಿಮೆ ಶಿವಾನುಭವ ಕಾರ್ಯಕ್ರಮದಲ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಎಚ್.ಎಂ. ಜಗದೀಶ, ಕೆ.ಎಂ. ಚಂದ್ರಶೇಖರಸ್ವಾಮಿ, ಮೆಟ್ರಿ ಯೋಗರಾಜ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕಾಯಕ ಮಾಡಿ ಗಳಿಸಿದ ಸಂಪಾದನೆಯಲ್ಲಿಯೇ ತೃಪ್ತಿ ಹೊಂದಬೇಕು

ಕಂಪ್ಲಿ: ಶರಣರು ಸಾರಿದ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕಾಯಕದ ತತ್ವ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸ್ವಚ್ಛ ಹಾಗೂ ನ್ಯಾಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಹೇಳಿದರು.

ಪಟ್ಟಣದ ಗುರುಮಠದಲ್ಲಿ ಶನಿವಾರ ಲಿಂ.ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಲಿಂ. ಓದ್ಸೋ ಜಡೆಮ್ಮನವರ ಸ್ಮರಣಾರ್ಥ ಆಯೋಜಿಸಿದ್ದ 266ನೇ ಹುಣ್ಣಿಮೆ ಶಿವಾನುಭವ ಕಾರ್ಯಕ್ರಮದಲ್ಲಿ ಶಿವಶರಣರ ಪಥ ಕುರಿತು ಉಪನ್ಯಾಸ ನೀಡಿದರು.

ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕಾಯಕ ಮಾಡಿ ಗಳಿಸಿದ ಸಂಪಾದನೆಯಲ್ಲಿಯೇ ತೃಪ್ತಿ ಹೊಂದಬೇಕು. ಅನ್ಯಾಯದ ಮಾರ್ಗದಲ್ಲಿ ಸಂಪಾದನೆ ಮಾಡುವುದಾಗಲಿ, ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳುವುದಾಗಲಿ ಮಾಡಬಾರದು ಎಂಬ ಮೌಲ್ಯ ಶರಣರು ಸಮಾಜಕ್ಕೆ ಬೋಧಿಸಿದ್ದಾರೆ. ಈ ತತ್ವ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿನ ಹಲವು ಅನಿಷ್ಟಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಶರಣರ ವಚನಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗಿರದೆ, ಉತ್ತಮ ಬದುಕು ಹಾಗೂ ಸಮಾಜ ನಿರ್ಮಾಣಕ್ಕೆ ಅಗತ್ಯ ಮೌಲ್ಯ ಸಾರುತ್ತವೆ. ಸತ್ಯ, ಪ್ರಾಮಾಣಿಕತೆ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮೌಲ್ಯ ಜೀವನದಲ್ಲಿ ಪಾಲಿಸುವ ಮೂಲಕ ಸಮಾಜದಲ್ಲಿ ಪರಸ್ಪರ ವಿಶ್ವಾಸ ಹಾಗೂ ಸೌಹಾರ್ದತೆ ಬೆಳೆಸಬಹುದು ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಭ್ರಷ್ಟಾಚಾರ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆ ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶರಣರು ತೋರಿದ ಸರಳ ಜೀವನ, ಪ್ರಾಮಾಣಿಕ ಕಾಯಕ ಮತ್ತು ನೈತಿಕ ಮೌಲ್ಯ ಎಲ್ಲರಿಗೂ ಮಾರ್ಗದರ್ಶಿಯಾಗಬೇಕು. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತಿ ಇಟಗಿ, ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಎಚ್.ಎಂ. ಜಗದೀಶ, ಕೆ.ಎಂ. ಚಂದ್ರಶೇಖರಸ್ವಾಮಿ, ಮೆಟ್ರಿ ಯೋಗರಾಜ, ಮೃತ್ಯುಂಜಯ ಶಾಬಾದಿ ಸೇರಿದಂತೆ ಭಕ್ತರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು