ಕಿಡ್ನಿ ಫೇಲ್ ಆಗಿದೆ ಮೆದುಳು ಫೇಲ್ ಆಗಿಲ್ಲ

KannadaprabhaNewsNetwork |  
Published : Oct 08, 2026, 01:45 AM IST
7ಎಚ್ಎಸ್ಎನ್17 :  | Kannada Prabha

ಸಾರಾಂಶ

ನನಗೆ ಕಿಡ್ನಿ ಫೇಲ್ ಆಗಿದೆ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಆದರೆ ಮೆದುಳು ಫೇಲ್ ಆಗಿಲ್ಲ. ಆರೋಗ್ಯದ ಕಾರಣಕ್ಕೆ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.‘ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಪಿತೃಪಕ್ಷ ಮುಗಿದ ಬಳಿಕ ರಾಜಕೀಯವಾಗಿ ಸಕ್ರಿಯವಾಗುತ್ತೇನೆ’ ಎಂದು ಅವರು ಹೇಳಿದರು. ಪಿತೃಪಕ್ಷದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮತ್ತೆ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ನನಗೆ ಕಿಡ್ನಿ ಫೇಲ್‌ ಆಗಿದೆ. ಆದರೆ, ಮೆದುಳಲ್ಲ ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದು, ಪಿತೃಪಕ್ಷದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮತ್ತೆ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಿಡ್ನಿ ಫೇಲ್ ಆಗಿದೆ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಆದರೆ ಮೆದುಳು ಫೇಲ್ ಆಗಿಲ್ಲ. ಆರೋಗ್ಯದ ಕಾರಣಕ್ಕೆ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.‘ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಪಿತೃಪಕ್ಷ ಮುಗಿದ ಬಳಿಕ ರಾಜಕೀಯವಾಗಿ ಸಕ್ರಿಯವಾಗುತ್ತೇನೆ’ ಎಂದು ಅವರು ಹೇಳಿದರು. ಎಸ್‌ಐಆರ್‌: ನ್ಯಾಯಾಲಯದ ತೀರ್ಪಿಗೆ ಕಾಯಬೇಕು

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ದೇಶಾದ್ಯಂತ ನಡೆಯುತ್ತಿರುವ ರಾಜಕೀಯ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ರಾಜಕೀಯ ಪಕ್ಷಗಳು ಸಂಯಮದಿಂದ ವರ್ತಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.‘ರಾಷ್ಟ್ರಮಟ್ಟದಲ್ಲಿ ಎಸ್‌ಐಆರ್ ಕುರಿತು ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಈ ವಿಚಾರವನ್ನು ಕೈಗೆತ್ತಿಕೊಂಡಿದೆ. ಎರಡೂ ಕಡೆಯ ವಾದಗಳನ್ನು ಆಲಿಸಲು ಅವಕಾಶ ಮಾಡಿಕೊಟ್ಟಿದೆ. ಅಂತಿಮವಾಗಿ ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. ತೀರ್ಪು ಬರುವ ಮುನ್ನ ದುಡುಕಿ ಮಾತನಾಡುವುದು ಸರಿಯಲ್ಲ’ ಎಂದರು.ರಾಹುಲ್‌ಗಾಂಧಿ ಅವರ ಆರೋಪಗಳ ಕುರಿತು ಮಾತನಾಡಿದ ಅವರು, ‘ಅವರು ತಮ್ಮ ಆರೋಪಗಳನ್ನು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ಮುಂದೆಯೇ ವಿಚಾರಣೆ ನಡೆಯುತ್ತಿದೆ. ಅಂತಿಮ ನಿರ್ಧಾರ ನ್ಯಾಯಾಲಯದ್ದಾಗಲಿದೆ’ ಎಂದು ಹೇಳಿದರು. ರಾಹುಲ್‌ಗಾಂಧಿ ಯುವಕರು. ಅವರಿಗೆ ಅನುಭವದ ಕೊರತೆ ಇದೆ ಎಂದು ನಾನು ಹೇಳುವುದಿಲ್ಲ. ಯುವಕರ ಮನಸ್ಸು ಸ್ವಲ್ಪ ವೇಗವಾಗಿ ಸಾಗಬೇಕು ಎಂದು ಬಯಸುತ್ತದೆ. ಅದೇ ಕಾರಣಕ್ಕೆ ಅವರು ವೇಗವಾಗಿ ಹೋಗುತ್ತಿದ್ದಾರೆ. ಆದರೆ ಪ್ರಮುಖ ವಿಚಾರಗಳಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯುವ ತಾಳ್ಮೆ ಅಗತ್ಯ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ:

ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ದೇವೇಗೌಡರು, ಎರಡೂ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡಲಿವೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಈ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲಿವೆ. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆಯಲ್ಲೂ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಮುಂದಿನ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ ಎಂದರು. ನೈಸ್‌ನ ಕೂಸು ಎಂದರೆ ಸೂಲಗಿತ್ತಿ ಯಾರು? ‘ನೈಸ್’ ದೇವೇಗೌಡರ ಕೂಸು ಎಂದು ಹೇಳುತ್ತಾರೆ. ಕೂಸು ಎಂದ ಮೇಲೆ ಸೂಲಗಿತ್ತಿ ಯಾರು ಎಂಬುದೂ ಬೇಕಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು, 1995ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರು ಜಾರಿಗೆ ತಂದ ಆರ್ಥಿಕ ಹಾಗೂ ಕೈಗಾರಿಕಾ ನೀತಿಯ ಹಿನ್ನೆಲೆಯಲ್ಲಿ ಅಮೆರಿಕದ ಎರಡು ಕಂಪನಿಗಳು ಮತ್ತು ದೇಶದ ಒಂದು ಕಂಪನಿ ಮುಂದೆ ಬಂದಿದ್ದವು. ಬಳಿಕ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ನೈಸ್ ಪ್ರಕರಣದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ತೀರ್ಪು ಸೇರಿದಂತೆ ನ್ಯಾಯಾಂಗದ ಮುಂದಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಸತ್ಯವನ್ನು ಗಮನಿಸುತ್ತಿರುತ್ತಾರೆ ಎಂದರು.

----

*ಬಾಕ್ಸ್‌ : ಹರದನಹಳ್ಳಿಯಲ್ಲಿ ಪಿತೃಪಕ್ಷ

ಈ ಬಾರಿ ಕುಟುಂಬದ ಎಲ್ಲರೂ ಹರದನಹಳ್ಳಿಯಲ್ಲಿ ಪಿತೃಪಕ್ಷ ಆಚರಿಸಲು ತೀರ್ಮಾನಿಸಿರುವುದಾಗಿ ದೇವೇಗೌಡರು ತಿಳಿಸಿದರು. ನಾನು ಮತ್ತು ನನ್ನ ತಮ್ಮ ವಿಭಾಗವಾದ ಬಳಿಕ ಪಿತೃಪಕ್ಷವನ್ನು ಪ್ರತ್ಯೇಕವಾಗಿ ಆಚರಿಸುತ್ತಿದ್ದೆವು. ಆದರೆ ಈ ಬಾರಿ ನನ್ನ ಮಕ್ಕಳು, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಎಲ್ಲರೂ ಹರದನಹಳ್ಳಿಯಲ್ಲೇ ಪಿತೃಪಕ್ಷ ಆಚರಿಸಲು ತೀರ್ಮಾನಿಸಿದ್ದಾರೆ. ಶನಿವಾರ ಹಬ್ಬ ಆಚರಿಸಲಿದ್ದು, ಮೊಮ್ಮಕ್ಕಳು ಸೇರಿದಂತೆ ಕುಟುಂಬದವರು ಭಾಗವಹಿಸಲಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಖಂಡ್ರೆ
ಮೀನು ಹಿಡಿಯುವ ಕಾರ್ಯ ಟೆಂಡರ್ ಮೂಲಕ ನಡೆಸಿ