ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ವಿದ್ಯಾರ್ಥಿ ನಿಲಯಗಳನ್ನು ರಾಜ್ಯಾದ್ಯಂತ ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾದರು ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜು ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ೧೧೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀತ ಪದ್ಧತಿ ನಿರ್ಮೂಲನೆ, ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದು ಸಾಲ ಮನ್ನಾ ಮಾಡಿ ಬಡ ಜನತೆಯ ಭವಿಷ್ಯದಲ್ಲಿ ಜ್ಯೋತಿ ಬೆಳಗಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದರು. ಭೂ ಸುಧಾರಣಾ ಕಾಯ್ದೆ ಜಾರಿ ಮಾಡುವ ಮೂಲಕ ೮ ಲಕ್ಷ ರೈತರಿಗೆ ಭೂ ಮಾಲೀಕರಿಂದ ಭೂಮಿ ಕೊಡಿಸುವಲ್ಲಿ ಡಿ.ದೇವರಾಜ ಅರಸು ಪ್ರಮುಖ ಪಾತ್ರವಹಿಸಿದ್ದರು ಎಂದು ನೆನೆದರು. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜಾರಿಗೆ ತಂದಂತಹ ೨೦ ಅಂಶಗಳ ಕಾರ್ಯಕ್ರಮವನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀರಾವರಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಅರಸು ಅವರು ಅಂದಿನ ವಿರೋಧ ಪಕ್ಷದ ನಾಯಕರ ಮೆಚ್ಚುಗೆಗೂ ಪಾತ್ರರಾದರು. ಕನ್ನಡ ನಾಡು ನುಡಿಗೆ ಹೆಚ್ಚು ಒತ್ತು ನೀಡಿದ ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಕಾರಣೀ ಭೂತರಾದರು ಮತ್ತು ೧೯೬೯ರಿಂದ ೧೯೭೯ರವರೆಗೆ ಅರಸು ಯುಗವೆಂದು ಮನೆ ಮಾತಾಗಿತ್ತು ಎಂದು ತಿಳಿಸಿದರು.
ಅರಸು ಅವರು ಸ್ಥಾಪನೆ ಮಾಡಿರುವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾ. ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಬಿಸಿಎಂ ಅಧಿಕಾರಿ ಪಿ.ಕೆ.ಹರೀಶ್, ಆರಕ್ಷಕ ವೃತ್ತ ನಿರೀಕ್ಷಕ ಪ್ರದೀಪ್, ವಿವಿಧ ಇಲಾಖೆ ಅಧಿಕಾರಿಗಳಾದ ಸೋಮಶೇಖರ್, ಧನಲಕ್ಷ್ಮೀ, ಪ್ರೇಮಾ ಉಪಸ್ಥಿತರಿದ್ದರು.