ಗದಗ: ಸಂವಿಧಾನದ ಪಾಲನೆಯಲ್ಲಿ ದೇಶಾದ್ಯಂತ ಧಕ್ಕೆಯಾಗುತ್ತಿದ್ದು, ಅದರಲ್ಲಿಯೂ ಸಂವಿಧಾನಬದ್ಧವಾಗಿ ಸ್ಥಾಪಿತವಾದ ಸಂಸ್ಥೆಗಳಲ್ಲಿಯೇ ಅದರ ಪಾಲನೆಯಲ್ಲಿ ಲೋಪವಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಿಷಾದಿಸಿದರು.
ಸಂವಿಧಾನದ ರಕ್ಷಕರಾಗಿರುವ ಉನ್ನತ ಹುದ್ದೆ ಅಲಂಕರಿಸಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ದೇಶದ ಜವಾಬ್ದಾರಿಯುತರು ಸಂವಿಧಾನದ ಉಲ್ಲಂಘನೆ ತಮ್ಮ ಮನಸೋ ಇಚ್ಛೆಯಂತೆ ಅದನ್ನು ಅರ್ಥೈಸಿ, ಅಗೌರವಿಸುವ, ಸಂವಿಧಾನವನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ವಿವಾದದ ಸಂಗತಿ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಷಯಗಳನ್ನು ಶಾಸನಸಭೆಗಳಲ್ಲೂ ಗಮನಿಸದೇ ಕೇವಲ ರಾಜಕೀಯ ಕಾರಣಕ್ಕಾಗಿ ಮತ್ತು ಮುಂದಾಲೋಚನೆ ಇಲ್ಲದೇ ಕೆಲವು ಅಂಶಗಳನ್ನು ತಮ್ಮ ರಾಜಕೀಯ ನಿಲುವುಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಕರ್ನಾಟಕವು ತನ್ನ ಸ್ವಂತ ಸಂಪನ್ಮೂಲಗಳಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಕರ್ನಾಟಕದ ತಲಾ ಆದಾಯವು ಜಿಲ್ಲಾವಾರು ಲೆಕ್ಕ ಹಾಕಿದಾಗ ಗಣನೀಯವಾಗಿ ಹೆಚ್ಚಾಗಿರುವುದು ನೆಮ್ಮದಿ ತಂದಿದೆ ಎಂದರು.ವಿಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಡಿಸಿ ಸಿ.ಎನ್. ಶ್ರೀಧರ, ಎಸ್ಪಿ ರೋಹನ ಜಗದೀಶ, ಎಸಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.