;Resize=(412,232))
ಬೆಂಗಳೂರು : ರಾಜ್ಯವನ್ನು ನವೋದ್ಯಮಗಳ ರಾಜಧಾನಿಯನ್ನಾಗಿ ರೂಪಿಸಲು ಜಾರಿಗೆ ತಂದಿರುವ ನೀತಿ, ಹಿಂದುಳಿದವರಿಗೆ ಆರ್ಥಿಕ ಚೈತನ್ಯ ನೀಡಲು ರೂಪಿಸಿದ ಯೋಜನೆಗಳು, ಪಂಚ ಗ್ಯಾರಂಟಿಗಳ ಜಾರಿ ಹಾಗೂ ಉತ್ತಮ ಕಾನೂನು ಸುವ್ಯವಸ್ಥೆ ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್‌ಗಿರಿ ನೀಡಿದ್ದಾರೆ.
77ನೇ ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ರಾಜ್ಯಕ್ಕೆ ಸಂದೇಶ ನೀಡಿದ ಅವರು, ರಾಜ್ಯ ಸರ್ಕಾರ ಸಂವಿಧಾನದ ಆಶಯದಂತೆ ಹಿಂದುಳಿದವರ ಬಲವರ್ಧನೆಗಾಗಿ, ಜನರಿಗೆ ಆರ್ಥಿಕ ಚೈತನ್ಯ ನೀಡಲು ಹಲವು ಯೋಜನೆ ರೂಪಿಸಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರು. ವಿನಿಯೋಗಿಸಿದೆ. 2025-26ನೇ ಬಜೆಟ್‌ನಲ್ಲಿ ಬಂಡವಾಳ ವೆಚ್ಚಗಳಿಗಾಗಿ 83,200 ಕೋಟಿ ರು. ವ್ಯಯಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಮೂಲ ಸೌಕರ್ಯಕ್ಕಾಗಿ 1.50 ಲಕ್ಷ ಕೋಟಿ ರು. ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. 2025ರ ಇಂಡಿಯಾ ಜಸ್ಟೀಸ್ ವರದಿ ಪ್ರಕಾರ ನ್ಯಾಯ ನೀಡಿಕೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಆ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವೆಂಬ ಹೆಗ್ಗಳಿಕೆಯನ್ನು ರಕ್ಷಿಸುತ್ತಾ ಬಂದಿದೆ. ಇನ್ನು, ಆಹಾರ ಕಲಬೆರಕೆ ವಿರುದ್ಧ ಸಮಯ ಸಾರಲಾಗಿದ್ದು, ಕಲಬೆರಕೆಯಂಥ ಕ್ರಿಮಿನಲ್ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗೆಯೇ, ಡ್ರಗ್ಸ್ ಸೇರಿ ಮಾದಕ ವಸ್ತು ಮಾಫಿಯಾಕ್ಕೆ ಕಡಿವಾಣ ಹಾಕಲು ಮತ್ತು ಅದರಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಗತ್ಯ ಕಾನೂನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯವನ್ನು ನವೋದ್ಯಮಗಳ ರಾಜಧಾನಿಯನ್ನಾಗಿ ರೂಪಿಸಲು ಕರ್ನಾಟಕ ನವೋದ್ಯಮ ನೀತಿ ಜಾರಿಗೆ ತರಲಾಗಿದೆ. ಬೆಂಗಳೂರಿನಾಚೆ ತಂತ್ರಜ್ಞಾನ ಕೊಂಡೊಯ್ಯಲು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ರೂಪಿಸಿ 1 ಸಾವಿರ ಕೋಟಿ ರು. ಅನುದಾನ ಒದಗಿಸಲಾಗಿದೆ. ಈ ಕ್ರಮಗಳಿಂದ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ ಎಂದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಲ್ಲೂ 7 ಗಂಟೆ ಕಾಲ ವಿದ್ಯುತ್ ಪೂರೈಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅದರ ಜತೆಗೆ ಕಬ್ಬು ಕಟಾವು ಯಂತ್ರಗಳಿಗೆ ಪ್ರೋತ್ಸಾಹ ಧನ, ರಾಗಿ, ಭತ್ತ, ಮೆಕ್ಕಜೋಳ ಸೇರಿ ಇನ್ನಿತರ ಬೆಳೆಗಳನ್ನು ಕಟಾವು ಮಾಡಲು ಕೃಷಿ ಯಂತ್ರೋಪಕರಣ ಯೋಜನೆ ಅಡಿ ರೈತರಿಗೆ ನೆರವು ನೀಡಲಾಗಿದೆ. ಒಟ್ಟಾರೆ ರಾಜ್ಯ ಸರ್ಕಾರ 10 ಸಾವಿರ ಕೋಟಿ ಗೂ ಹೆಚ್ಚಿನ ಹಣವನ್ನು ಸಬ್ಸಿಡಿ ಸೇರಿ ಇನ್ನಿತರ ರೂಪದಲ್ಲಿ ರೈತರಿಗೆ ನೀಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರಿದ್ದರು.
ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳುವ ಹೊಣೆ ಎಲ್ಲರ ಮೇಲಿದೆ: ರಾಜ್ಯಪಾಲ
ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಿಸಬೇಕಿದ್ದು, ಅದಕ್ಕೆ ಕುಂದುಂಟಾಗದಂತೆ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜತೆಗೆ ಸಂವಿಧಾನ ರಕ್ಷಣೆಯ ಅಗತ್ಯತೆಯಿದ್ದು, ಸಂವಿಧಾನದ ಪ್ರಸ್ತುತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಒಕ್ಕೂಟ ಮತ್ತು ರಾಜ್ಯಗಳ ನಡುವ ಹಂಚಿಕೆ ಮಾಡಿದೆ. ದೇಶದ ಅಖಂಡತೆ, ಸಮಗ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವಾಗಲೂ ರಾಜ್ಯಗಳ ಅಧಿಕಾರ ವ್ಯಾಪ್ತಿ ಗುರುತಿಸಿ ಗೌರವಿಸಿದೆ. ಆ ಮೂಲಕ ದೇಶದ ವಿವಿಧತೆ ಎತ್ತಿ ಹಿಡಿದಿದೆ. ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಾಣ ಸಂವಿಧಾನದ ಕನಸು. ಆ ಕನಸಿಗೆ ಕುಂದುಂಟಾಗದಂತೆ ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ ಎಂದು ಕರೆ ನೀಡಿದರು.
ಕೇಂದ್ರದ ಮೇಲೆ ಟೀಕೆಗೆ ಆಸ್ಪದವಿಲ್ಲ
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆಯ ನಂತರ ಗಣರಾಜ್ಯೋತ್ಸವ ಭಾಷಣದತ್ತ ಎಲ್ಲರ ಗಮನ ನೆಟ್ಟಿತ್ತು. ಸರ್ಕಾರ ಕೇಂದ್ರದ ವಿರುದ್ಧ ಮತ್ತು ಮನರೇಗಾ ಯೋಜನೆ ಪರವಾದ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆಯ ಬಳಿಕ ಕೇಂದ್ರ ಸರ್ಕಾರವನ್ನು ಟೀಕಿಸುವ ಮತ್ತು ಮನರೇಗಾ ಯೋಜನೆ ಪರವಾದಂಥ ಯಾವುದೇ ಅಂಶವನ್ನೂ ಭಾಷಣದಲ್ಲಿ ಸೇರಿಸಿಲ್ಲ.