ಮಳೆರಾಯನ ಆರ್ಭಟಕ್ಕೆ ಕೋಡಿ ಬಿದ್ದ ಕೆರೆಗಳು

KannadaprabhaNewsNetwork | Published : Oct 26, 2024 1:04 AM

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಹುತೇಕ ಕೆರೆಗಳು ಕೋಡಿ ಹರಿಯುತ್ತಿದ್ದರೆ, ಮತ್ತೊಂದು ಕಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಮತ್ತು ಜನಸಂಚಾರಕ್ಕೆ ಅಡಚಣೆ, ಅನಾಹುತಗಳು ಸಂಭವಿಸುತ್ತಿವೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಹುತೇಕ ಕೆರೆಗಳು ಕೋಡಿ ಹರಿಯುತ್ತಿದ್ದರೆ, ಮತ್ತೊಂದು ಕಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಮತ್ತು ಜನಸಂಚಾರಕ್ಕೆ ಅಡಚಣೆ, ಅನಾಹುತಗಳು ಸಂಭವಿಸುತ್ತಿವೆ.

ಬೆಟ್ಟದ ನೀರು ಮನೆಗಳಿಗೆ:

ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಬಾರಿ ಮಳೆಗೆ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಿಂದ ಹರಿದು ಬರುವ ನೀರು ಶಿವಗಂಗೆ ಗ್ರಾಮದ ಮನೆಗಳಿಗೆ ಗೋಡೆ ಮುಖಾಂತರ ಹರಿದು ಬರುತ್ತಿದೆ. ಇಲ್ಲಿನ ಬಹುತೇಕ ಗ್ರಾಮಸ್ಥರು ಮನೆ ಕುಸಿದು ಬೀಳುವ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬೆಟ್ಟದ ಬುಡದಲ್ಲಿರುವ ಮನೆಗಳಿಗೆ ಬೆಟ್ಟದ ಜೋಪು ನೀರು ಹರಿಯುತ್ತಿದೆ. ಮಳೆ ನಿಲ್ಲುವವರೆಗೂ ಈ ನೀರು ಮನೆಯೊಳಗೆ ಬರುತ್ತಲೇ ಇರುತ್ತದೆ ಎಂಬುದು ನಿವಾಸಿಗಳ ಅಳಲು ತೋಡಿಕೊಂಡಿದ್ದಾರೆ.

ಕೆರೆಯಂತಾದ ರಸ್ತೆಗಳು:

ಪಟ್ಟಣದ ಶಿವಗಂಗೆ ರಸ್ತೆ, ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಗಳು ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತು ಕೆರೆಯಾಗುತ್ತದೆ. ಇದರಿಂದ ವಾಹನಗಳು ಚಲಿಸಲಾಗದೆ ಪರದಾಡುವಂತಾಗಿದೆ. ಪಟ್ಟಣದಲ್ಲಿ ರಾಜಕಾಲುವೆ ತುಂಬಿದ ಮಳೆಯ ನೀರು ರಸ್ತೆಯಲ್ಲಿ ಹರಿದು ಎಲ್ಲಾ ರಸ್ತೆಗಳು ಕೆರೆಯಂತಾಗಿವೆ. ಅದಲ್ಲದೆ ರಾಷ್ಟ್ರೀಯ ಹೆದ್ದಾರಿ-೪೮ರ ಬೇಗೂರು ಹಾಗೂ ಎಡೇಹಳ್ಳಿ, ಹಳೆನಿಜಗಲ್ ಗ್ರಾಮದ ಬಳಿ ರಸ್ತೆಯಲ್ಲಿ ಅರ್ಧ ಅಡಿ ನೀರು ರಸ್ತೆಯ ಮೆಲೆ ಹರಿದು ಸವಾರರು ವಾಹನಗಳನ್ನು ಚಲಿಸಲಾಗದೆ ಸಂಚಾರ ದಟ್ಟಣೆಯಾಗಿದೆ.

ಪೆಟ್ರೋಲ್ ಬಂಕ್‌ಗೆ ನುಗ್ಗಿದ ನೀರು:

ರಾಷ್ಟ್ರೀಯ ಹೆದ್ದಾರಿ-೪೮ರ ಎಡೇಹಳ್ಳಿ ಗ್ರಾಮದ ಸಮೀಪವಿರುವ ಎಚ್‌ಪಿ ಪೆಟ್ರೋಲ್ ಬಳಿ ಇದ್ದ ಚರಂಡಿ ಮುಚ್ಚಿಹೋಗಿದ್ದು ಕೈಗಾರಿಕಾ ಪ್ರದೇಶದಿಂದ ಬರುವ ನೀರು ಪೆಟ್ರೋಲ್ ಬಂಕ್ ಮುಂದೆ ನಿಂತು ಸಮುದ್ರದಂತೆ ಕಂಡು ಬಂದಿದ್ದಲ್ಲದೆ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ.

ಮನೆಗಳಿಗೆ ನುಗ್ಗಿದ ನೀರು:

ತಾಲೂಕಿನ ತೊರೆಕೆಂಪೋಹಳ್ಳಿಯಲ್ಲಿ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾದವು. ಎಲೆಕ್ಟ್ರಾನಿಕ್ಸ್ ವಸ್ತುಗಳು, ದಿನಸಿ ಪದಾರ್ಥ, ಹೊದಿಕೆಗಳು ನೀರಿನಲ್ಲಿ ತೇಲುತ್ತಿದ್ದವು. ಗ್ರಾಮಸ್ಥರು ಇಡೀ ರಾತ್ರಿ ನಿದ್ದೆಯಿಲ್ಲದೆ ಜಾಗರಣೆ ಮಾಡುವಂತಾಯಿತು.

ಕೋಡಿ ಹರಿದ ಕೆರೆಗಳು:

ಹೋಬಳಿಯ ಹಳೆನಿಜಗಲ್ ಕೆರೆ, ದೇವರಹೊಸಹಳ್ಳಿ ಕೆರೆ, ಹೊಸಹಳ್ಳಿ ಕೆರೆ, ಕೆಂಗಲ್ ಕೆರೆಗಳು ಕೋಡಿ ಹರಿಯುತ್ತಿವೆ.

ಪೋಟೋ 7 :

ಕಟ್ಟೆಯಲ್ಲಿ ನೀರು ಸಂಗ್ರಹ.

Share this article