ಕನ್ನಡಪ್ರಭ ವಾರ್ತೆ ಬೆಂಗಳೂರು
ಅನಿಲ್ ಕುಂಬ್ಳೆ ವೃತ್ತದಲ್ಲಿ ನಸುಕಿನ 3 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಆರೋಪಿ ಚಾಲಕನ ಬಗ್ಗೆ ಮಾಹಿತಿ ಕೋರಿ ಸಾರಿಗೆ ಇಲಾಖೆಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಈ ಕೃತ್ಯದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಾಜಿನಗರ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿವೇಗವಾಗಿ ಲ್ಯಾಬೋರ್ಗಿನಿ ಕಾರ (ಕೆಎ-05ಎನ್‌ಆರ್0009) ನ್ನು ಚಾಲಕ ಓಡಿಸಿಕೊಂಡು ಬಂದಿದ್ದಾನೆ. ಬಳಿಕ ಅನಿಲ್ ಕುಂಬ್ಳೆ ವೃತ್ತದಲ್ಲಿ ಎರಡು ಸುತ್ತು ಅತಿವೇಗವಾಗಿ ತಿರುಗಿಸಿ ಮತ್ತೆ ಶಿವಾಜಿನಗರ ಕಡೆಗೆ ಅಷ್ಟೇ ಶರವೇಗದಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಪಾಯಕಾರಿ ಸಾಹಸದ ಪ್ರದರ್ಶನಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.