ಗೋಮಾಳದಲ್ಲಿನ ಜಮೀನು ಅಕ್ರಮವಾಗಿ ಪ್ರಭಾವಿಗಳ ಪಾಲು

KannadaprabhaNewsNetwork |  
Published : Aug 02, 2024, 12:48 AM IST
1 ಕ.ಟಿ.ಇ.ಕೆ ಚಿತ್ರ 1 : ಟೇಕಲ್‌ನ ಕೆ.ಜಿ.ಹಳ್ಳಿ ಸರ್ವೆ ನಂ.73 ಹಾಗೂ 10 ರ ಸರ್ಕಾರಿ ಜಾಗವನ್ನು ಸಂರಕ್ಷಿಸಿ ಎಂದು ಕೋಲಾರ ಜಿಲ್ಲಾ ಜೆಡಿಎಸ್ ಎಸ್‌ಸಿ ಘಟಕದ ಉಪಾಧ್ಯಕ್ಷ ಯಲುವಗುಳಿ ವೈ.ಎಂ.ನಾಗರಾಜ್ ಟೇಕಲ್ ನಾಡಕಛೇರಿ ಆರ್‌ಐ ನಾರಾಯಣಸ್ವಾಮಿಗೆ ಮನವಿ ಪತ್ರ ನೀಡುತ್ತಿದ್ದಾರೆ. | Kannada Prabha

ಸಾರಾಂಶ

ಕೆ.ಜಿ.ಹಳ್ಳಿ ಗ್ರಾಪಂ ಕಚೇರಿ ಮುಂಭಾಗದಲ್ಲಿಯೇ ಸರ್ಕಾರಿ ಜಾಗ ಸರ್ವೇ ನಂ.10 ಇದ್ದು ಅದನ್ನು ಕೆಲವರು ನಕಲಿ 9, 10 ಪತ್ರ ಮಾಡಿ ಜಾಗ ನಮ್ಮದೆಂದು ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಳ್ಳಲು ಕಳೆದ ಮೂರು ದಿನಗಳಿಂದ ಜೆಸಿಬಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಟೇಕಲ್: ಕೆ.ಜಿ.ಹಳ್ಳಿ ಗ್ರಾಮದ ಸರ್ವೇ ನಂ.73 ಹಾಗೂ 10 ರ ಗೋಮಾಳದಲ್ಲಿನ ಜಮೀನುಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಕೆಲವರು ನಿವೇಶನಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಉಳಿದಿರುವ ಜಾಗವನ್ನು ಕೆಲವರು ಆಕ್ರಮಿಸಿಕೊಳ್ಳುತ್ತಿದ್ದು, ಕಂದಾಯ ಇಲಾಖೆ ಸರ್ಕಾರಿ ಸ್ಥಳವನ್ನು ಸಂರಕ್ಷಿಸಬೇಕೆಂದು ಕೋಲಾರ ಜಿಲ್ಲಾ ಜೆಡಿಎಸ್‌ನ ಎಸ್‌ಸಿ ಘಟಕದ ಉಪಾಧ್ಯಕ್ಷ ಯಲುವಗುಳಿ ವೈ.ಎಂ.ನಾಗರಾಜ್ ಮನವಿ ಮಾಡಿದ್ದಾರೆ. ಅವರು ಗುರುವಾರ ಈ ವಿಷಯದ ಬಗ್ಗೆ ಟೇಕಲ್ ನಾಡಕಚೇರಿ ಕಂದಾಯ ಅಧಿಕಾರಿ ನಾರಾಯಣಸ್ವಾಮಿಗೆ ಹಾಗೂ ಕೆ.ಜಿ.ಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುಳರವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.

ಕೆ.ಜಿ.ಹಳ್ಳಿ ಗ್ರಾಪಂ ಕಚೇರಿ ಮುಂಭಾಗದಲ್ಲಿಯೇ ಸರ್ಕಾರಿ ಜಾಗ ಸರ್ವೇ ನಂ.10 ಇದ್ದು ಅದನ್ನು ಕೆಲವರು ನಕಲಿ 9, 10 ಪತ್ರ ಮಾಡಿ ಜಾಗ ನಮ್ಮದೆಂದು ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಳ್ಳಲು ಕಳೆದ ಮೂರು ದಿನಗಳಿಂದ ಜೆಸಿಬಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೂ ತಂದಿದ್ದು, ತಹಸೀಲ್ದಾರ್‌ಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ. ಕೆ.ಜಿ.ಹಳ್ಳಿ ಸರ್ವೇ ನಂ.73 ರಲ್ಲಿಯೂ ಸಹ ಈ ಹಿಂದೆ ಕೆಲವರು ಮನೆ ಕಟ್ಟಿಕೊಂಡಿದ್ದು, ಇದೀಗ ಕೆಲವರು ಪ್ರಭಾವಿಗಳು ಅಲ್ಲಿಯೂ ಮನೆ ನಿರ್ಮಿಸಲು ಮುಂದಾಗುತ್ತಿರುವುದು ಕಂಡು ಬಂದಿದೆ. ಯಾರೇ ಆಗಲಿ ಬಡವರಿಗೆ, ನಿರ್ಗತಿಕರಿಗೆ ಪಂಚಾಯ್ತಿ ಇಲ್ಲವೇ ಸರ್ಕಾರದಿಂದ ಸ್ಥಳ ನೀಡಬೇಕು. ಅದರಲ್ಲೂ ಕೆ.ಜಿ.ಹಳ್ಳಿ ಗ್ರಾಮದವರಿಗೆ ಆದ್ಯತೆ ನೀಡಿ ಇಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ಕಂದಾಯ ಇಲಾಖೆಯು ಕ್ರಮ ಜರುಗಿಸುವಲ್ಲಿ ವಿಳಂಬ ಮಾಡುತ್ತಿದ್ದು, ಇದು ಹೀಗೆ ಮುಂದುವರೆದರೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ