ಬ್ಯಾಡಗಿ: ತಾಲೂಕಿನಲ್ಲಿ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೂ ಮಳೆಯಾಧಾರಿತ ಬಿತ್ತನೆಗೆ ಇನ್ನೂ ಭೂಮಿ ಸಿದ್ಧವಾಗಿಲ್ಲ. ಹೀಗಾಗಿ ಸೋಯಾಬಿನ್ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಗೆ ರೈತರು ಆತುರಪಡಬಾರದು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಹೇಳಿದ್ದಾರೆ.
1 ಅಡಿಗಿಂತ ಜಾಸ್ತಿ ತೇವಾಂಶವಿಲ್ಲ: ಮುಂಗಾರು ಸಮಯದಲ್ಲಿ ಕನಿಷ್ಠ 1 ಅಡಿಗಳಷ್ಟು ಒಳಗೆ ಭೂಮಿ ತೇವಾಂಶ ಹೊಂದಿದ್ದರೆ ಬಿತ್ತನೆಗೆ ಉತ್ತಮ. ಮಣ್ಣಿನಲ್ಲಿ ಸಮರ್ಪಕ ತೇವಾಂಶ ಲಭ್ಯವಾದ ಬಳಿಕವೇ ಬಿತ್ತನೆ ಮಾಡುವುದು ಸೂಕ್ತ. ಅಲ್ಲಿಯವರೆಗೂ ರೈತರು ಕೃಷಿಭೂಮಿ ಬಿತ್ತನೆಗೆ ಸಜ್ಜುಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ತಜ್ಞರ ಸಲಹೆ ಅನುಸರಿಸಿ: ಸೋಯಾಬೀನ್ ಬೆಳೆಗೆ ಮಣ್ಣಿನಲ್ಲಿ ಕನಿಷ್ಠ 3ರಿಂದ 5 ಸೆಂ.ಮೀ. ಆಳದ ವರೆಗೆ ಸಮರ್ಪಕ ತೇವಾಂಶ ಹಾಗೂ ತಂಪಾದ ವಾತಾವರಣ ಅಗತ್ಯವಾಗಿದ್ದು, ಸುಮಾರು 50ರಿಂದ 75 ಮಿ.ಮೀ. ಪರಿಣಾಮಕಾರಿ ಮಳೆಯಾದ ಬಳಿಕ ಬಿತ್ತನೆ ಕೈಗೊಳ್ಳುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಅನುಸರಿಸುವಂತೆ ಕೋರಿದ್ದಾರೆ.ಎರಡರಷ್ಟು ಬೀಜ ವಿತರಣೆ: ಕಳೆದ ವರ್ಷ ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ 240 ಕ್ವಿಂಟಲ್ ಸೋಯಾಬೀನ್ ಬೀಜ ವಿತರಣೆಗೊಂಡು ಸುಮಾರು 101 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿತ್ತು, ಈ ಬಾರಿ 480 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಸೋಯಾಬೀನ್ ಬೆಳೆ ವಿಸ್ತಾರವಾಗುವ ಸಾಧ್ಯತೆ ಇದೆ ಎಂದರು.