ಬುದ್ಧ, ಬಸವರ ನಾಡು ನಮ್ಮದು : ಸಿದ್ದರಾಮಯ್ಯ

KannadaprabhaNewsNetwork | Updated : Apr 28 2025, 12:28 PM IST

ಸಾರಾಂಶ

ಭಾರತ ಪ್ರತೀ ಸಂದರ್ಭದಲ್ಲೂ ಸಾಬೀತುಪಡಿಸಿದೆ. ಇತಿಹಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

 ಕುಂದಾಣ : ಶಾಂತಿ ಬೋಧಿಸಿದ ಬುದ್ಧ, ಬಸವರ ನಾಡು ನಮ್ಮದು. ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ. ಅನಿವಾರ್ಯತೆ ಆದಾಗ ಯುದ್ಧಕ್ಕೆ ಮುಂದಡಿ ಇಟ್ಟು ನಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. 

ಇದನ್ನು ಭಾರತ ಪ್ರತೀ ಸಂದರ್ಭದಲ್ಲೂ ಸಾಬೀತುಪಡಿಸಿದೆ. ಇತಿಹಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಭಾನುವಾರ ದೇವನಹಳ್ಳಿ ತಾಲೂಕು ಭೈರದೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾತ್ ವತಿಯಿಂದ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದರು.

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವುದು, ಪ್ರತಿಯೊಬ್ಬ ಭಾರತೀಯರಿಗೆ ಸೂಕ್ತ ರಕ್ಷಣೆ ಕೊಡುವುದು ನಮ್ಮ ಈ ಕ್ಷಣದ ಆದ್ಯತೆಯಾಗಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಾರತ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರ ನಾಡು. ಇಲ್ಲಿ ಭಯೋತ್ಪಾದನೆಗೆ, ಅಶಾಂತಿಗೆ ಅವಕಾಶ ಇಲ್ಲ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ಧ ಎನ್ನುವ ಮಾತನ್ನು ನಿನ್ನೆ ನಾನು ಹೇಳಿದ್ದೆ. ಆದರೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ಸುಳ್ಳನ್ನೇ ಬಿಜೆಪಿ ಪ್ರಚಾರ ಮಾಡುತ್ತಿದೆ. ನನ್ನ ಮಾತನ್ನು ತಿರುಚಿ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ನನ್ನದಲ್ಲದ ಅಭಿಪ್ರಾಯವನ್ನು ತೋರಿಸುತ್ತಿದ್ದಾರೆ. ಇದು ತಪ್ಪು, ಇದಕ್ಕೆ ನಾನು ಹೊಣೆಗಾರನಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಂದೇ ದಿನ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದ್ದೇವೆ. ಬಿಜೆಪಿ ಕನ್ನಡಕದ ಗಾಜುಗಳು ಅವರ ಅಧಿಕಾರಾವಧಿಯ ಕಲೆಗಳಿಂದ ಕೂಡಿದೆ. ಅದಕ್ಕೇ ಅವರು ನೋಡುವ ಕಡೆಯಲ್ಲೆಲ್ಲಾ ಕಲೆಗಳೇ ಕಾಣುತ್ತಿವೆ. ಬಿಜೆಪಿ ತನ್ನ ಕನ್ನಡಕ ಕ್ಲೀನ್ ಮಾಡಿಕೊಂಡರೆ ನಮ್ಮ ಸರ್ಕಾರದ ಅಭಿವೃದ್ಧಿ ಕಾಣುತ್ತದೆ ಎಂದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನಗಳನ್ನು ನೀಡಿ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತಲೇ ಇದ್ದೇವೆ. ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇಃ ಗ್ಯಾರಂಟಿಗಳನ್ನು ಜಾರಿ ಮಾಡಿ ಇದಕ್ಕಾಗಿ 80 ಸಾವಿರ ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು.ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಹಿಂದುಳಿದವರಗೆ, ಎಲ್ಲಾ ವರ್ಗದ ವರೆಗೂ ಅನುಕೂಲವಾಗಿದೆ. ಆದರೆ ವಿರೋಧ ಪಕ್ಷದವರು ಸುಖಾಸುಮ್ಮನೆ ಪ್ರತಿಭಟನೆ ಮಾಡ್ತಿದಾರೆ. ಕುಟುಂಬದ ಯಶಸ್ಸು, ಜೀವನದ ಯಶಸ್ಸಿಗೆ ನಾವು ಗ್ಯಾರಂಟಿಗಳನ್ನು ನೀಡಿದ್ದೇವೆ. ಎತ್ತಿನಹೊಳೆ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಗೆ ಆದಷ್ಟು ಶೀಘ್ರ ಹರಿಸಲಾಗುವುದು ಎಂದರು.

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಜಿಲ್ಲಾ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು, ಅವರು ಕಾರ್ಯಕ್ಕೆ ಹಾಗೂ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಿದ್ದಕ್ಕೆ ಸಿ.ಎಂ, ಡಿ.ಸಿ.ಎಂ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಸರ್ಕಾರದ ಎರಡು ವರ್ಷದ ಸಾಧನೆಯನ್ನು ಮೊದಲ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಇಂದು ಕಾರ್ಯಕ್ರಮ ಮಾಡ್ತಿದ್ದೇವೆ. 

ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ. ತಡವಾದರೂ ಹತ್ತು ಕೆ.ಜಿ ಅಕ್ಕಿಯನ್ನು ವಿತರಿಸಿದ್ದಾರೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಶಸ್ವಿಯಾಗಿ ಜಾರಿಗೆ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಕೊಟ್ಟ ಮೇಲೆ ಕೆರೆಗಳ ತುಂಬಿಸುವ ಮಾತನ್ನು ನೀವು ಹೇಳಿದ್ರಿ. ಆದ? ಬೇಗನೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಜಿಲ್ಲೆಯ ಕಟ್ಟ ಕಡೆಯ ಗ್ರಾಮಕ್ಕೂ ನೀರು ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಸಿಎಸ್‌ಆರ್ ಫಂಡ್ ಮೂಲಕ 150 ಕೋಟಿ ವೆಚ್ಚದಲ್ಲಿ ಶಾಲೆಗಳು ಅಭಿವೃದ್ಧಿ ಮಾಡ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2.50 ಲಕ್ಷ ಕುಟುಂಬಗಳಿಗೆ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ಕೊಡಿಸುವ ಮಹತ್ತರ ಉದ್ದೇಶ ಹೊಂದಿದ್ದು, ಮೊದಲ ಹಂತದಲ್ಲಿ 5 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳದ ಮೂಲಕ ಕೆಲಸವನ್ನು ಕೊಡಿಸಿದ್ದೇವೆ ಎಂದು ಸಚಿವರು ಹೇಳಿದರು. 

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಹದೇವಪ್ಪ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್, ಸಣ್ಣ ನೀರಾವರಿ ಇಲಾಖೆ ಸಚಿವರಾದ ಬೋಸುರಾಜು, ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ನೆಲಮಂಗಲ ಶಾಸಕರಾದ ಶ್ರೀನಿವಾಸ್, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ರಾಜ್ಯಾಧ್ಯಕ್ಷ ರೇವಣ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಅನುರಾಧ, ಎಸ್ಪಿ ಸಿ.ಕೆ ಬಾಬಾ, ಬಯಪ್ಪ ಅಧ್ಯಕ್ಷ ವಿ.ಶಾಂತಕುಮಾರ್, ನೀರ್ದೇಶಕರಾದ ಪ್ರಸನ್ನ ಕುಮರ್, ರಾಮಚಂದ್ರಪ್ಪ, ಮಂಜುನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯಧರ್ಶಿಕೆ.ಆರ್.ನಾಗೇಶ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ , ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಚಿನ್ನಪ್ಪ, ಲೋಕೇಶ್, ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Share this article