ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲವಿರುವ ಜಾಗ ವಕ್ಫ್ ಆಸ್ತಿ...!

KannadaprabhaNewsNetwork | Published : Oct 31, 2024 12:54 AM
೩೦ಕೆಎಂಎನ್‌ಡಿ-೮ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸರ್ವೆ ನಂ. ೭೪ರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು. | Kannada Prabha

ಸಾರಾಂಶ

ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದ ೬೦.೧೮ ಎಕರೆ ಜಮೀನು ಮುಸಲ್ಮಾನರಿಗೆ ಸೇರಿದ್ದು ಎಂಬ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದಲ್ಲಿರುವ ದೇಗುಲವಿರುವ ೬ ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಶ್ರೀರಂಗಪಟ್ಟಣ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿರುವ ವಕ್ಫ್ ಬೋರ್ಡ್ ಆಸ್ತಿ ಅವಾಂತರ ಜಿಲ್ಲೆಗೂ ಕಾಲಿರಿಸಿದೆ. ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದ ೬೦.೧೮ ಎಕರೆ ಜಮೀನು ಮುಸಲ್ಮಾನರಿಗೆ ಸೇರಿದ್ದು ಎಂಬ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದಲ್ಲಿರುವ ದೇಗುಲವಿರುವ ೬ ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮಹದೇವಪುರ ಗ್ರಾಮದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲದ ೬ ಗುಂಟೆ ಜಾಗ ಇದೀಗ ಬಂಜರು ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಗ್ರಾಮಸ್ಥರ ಮನೆ ದೇವರು ಹಾಗೂ ದೇಗುಲದ ಮೇಲೂ ವಕ್ಫ್ ಬೋರ್ಡ್ ಕಣ್ಣು ಹಾಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು:

‘ಮಠ, ದೇವಾಲಯಗಳ ಆಸ್ತಿಲೂ ವಕ್ಫ್ ಹೆಸರು!’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಪತ್ರಿಕೆ ಬುಧವಾರ ಸುದ್ದಿ ಪ್ರಕಟ ಮಾಡಿತ್ತು. ರಾಜ್ಯದ ಸಿಂದಗಿಯ ವಿರಕ್ತ ಮಠ, ಆಳಂದ ತಾಲೂಕಿನ ಶ್ರೀಸಾವಳೇಶ್ವರ ದೇವಸ್ಥಾನದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಇದೀಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲದ ೬ ಗುಂಟೆ ಜಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿರುವುದು ರೈತರು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಪಹಣಿ ಪರಿಶೀಲನೆ:

ದಿನೇ ದಿನೇ ರೈತರ ಜಮೀನು, ದೇಗುಲ ಹಾಗೂ ಮಠಕ್ಕೆ ಸೇರಿದ ಜಮೀನಿನ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ಬರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ರೈತರು ಹಾಗೂ ಸಾರ್ವಜನಿಕರು ನಿತ್ಯ ತಮ್ಮ ಜಮೀನಿನ ಪಹಣಿ ತೆಗೆದು ಪರಿಶೀಲನೆಗೆ ಮುಂದಾಗುತ್ತಿರುವುದು ತಾಲೂಕಿನಾದ್ಯಂತ ಕಂಡುಬಂದಿದೆ.

ಗ್ರಾಮಸ್ಥರ ಒತ್ತಾಯ:

ಗ್ರಾಮದ ಸರ್ವೆ ನಂ.೭೪ರಲ್ಲಿ ೬ ಗುಂಟೆ ಜಮೀನು ಈ ಹಿಂದಿನಿಂದಲೂ ಶ್ರೀ ಚಿಕ್ಕಮ್ಮ-ಚಿಕ್ಕದೇವಿ ದೇವಸ್ಥಾನದ ಹೆಸರಿನಲ್ಲಿದೆ. ಆದರೆ, ಇತ್ತೀಚಿನ ೨೦೨೨-೨೩ನೇ ಸಾಲಿನಿಂದ ಆರ್‌ಟಿಸಿ ಕಾಲಂ ೯ ರಲ್ಲಿ ಬಂಜರು ವಕ್ಫ್ ಆಸ್ತಿ ಎಂದು, ಕಲಂ ೧೧ ರಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದಾಗಿದೆ. ಹಾಗಾಗಿ ಪರಿಶೀಲಿಸಿ ಆರ್‌ಟಿಸಿಯಲ್ಲಿ ಬಂಜರು ಶ್ರೀಚಿಕ್ಕಮ್ಮ-ಚಿಕ್ಕದೇವಿ ದೇವಸ್ಥಾನ ಎಂದು ಇಂಡೀಕರಣ ಮಾಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

PREV