ಕೋಟ: ಪ್ರತಿಯೊಬ್ಬರೂ ತಮ್ಮ ನೆಲ ಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳಬೇಕು, ಆಗ ಮಾತ್ರ ನಾವು ಆಡುವ ಮಾತುಗಳಿಗೆ ನಿಜವಾದ ಬೆಲೆ ಬರುತ್ತದೆ. ಗ್ರಾಮೀಣ ಜನರ ಭಾಷೆ ಕುಂದಾಪ್ರ ಇಂದು ಇಲ್ಲಿನ ಜನರ ಜೊತೆಗೆ ಜಗತ್ತಿನಾದ್ಯಂತ ಹರಡುತ್ತಿದೆ, ಇದು ಕುಂದಾಪುರದ ಹಮ್ಮೆ ಎಂದು ಕುಂದಗನ್ನಡದ ರಾಯಬಾರಿ ಮನು ಹಂದಾಡಿ ಹೇಳಿದರು.ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ವತಿಯಿಂದ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ 5ನೇ ವರ್ಷದ ಕುಂದಾಪ್ರ ಭಾಷೆ - ಬದ್ಕಿನ ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಇದೇ ವೇಳೆ ಕುಂದಾಪ್ರ ರೇಡಿಯೋ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಇವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ನಿರ್ದೇಶಕಿ ಸೋನಾಲಿ ಸಂಪತ್ ಕುಮಾರ್ ಶೆಟ್ಟಿ ಪ್ರದಾನ ಮಾಡಿದರು.ಈ 5ನೇ ವರ್ಷದ ಅಂಗವಾಗಿ ವಿಶೇಷವಾಗಿ ಗ್ರಾಮ್ಯ ಸಾಧಕರಾದ ಗೀತಾ ಎ. ಕುಂದರ್, ಶಾಂತಾ ಐತಾಳ್, ಸುಬ್ಬಯ್ಯ ಪೂಜಾರಿ, ಕೊಲ್ಲು ಪೂಜಾರಿ ಬನ್ನಾಡಿ, ನಾರಾಯಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಆಸಾಡಿ ಒಡ್ರ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅನಾರೋಗ್ಯ ಪೀಡಿತ ಮಣೂರು ಪಡುಕರೆ ಚಂದ್ರಶೇಖರ ಕಾಂಚನ್ ಅವರಿಗೆ 25 ಸಾವಿರ ರು. ನೆರವು ನೀಡಲಾಯಿತು.ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕಿ ಮಲ್ಲಿಕಾ ತಾರಾನಾಥ್ ಹೊಳ್ಳ ಅವರು ಗ್ರಾಮೀಣ ಪರಿಕರಗಳನ್ನು, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅವರು ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಅನಾವರಣಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಪ್ರೇಮಾ ಶೆಟ್ಟಿ, ರಿಷಿರಾಜ್ ಸಾಸ್ತಾನ ಉದ್ಘಾಟಿಸಿದರು. ಅಭ್ಯಾಗತರಾಗಿ ಮಣೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಎಚ್. ಕುಂದರ್, ಸ್ನೇ ಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ. ಮಯ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ವೀಣಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ನರೇಂದ್ರ ಕುಮಾರ್ ಕೋಟ ಹಾಗೂ ಕಲಾವತಿ ಅಶೋಕ್ ನಿರೂಪಿಸಿದರು. ಜತೆ ಕಾರ್ಯದರ್ಶಿ ಶಕೀಲ ನಾಗರಾಜ್ ವಂದಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.