ಶಂಕರ ಭಟ್ಟ ತಾರೀಮಕ್ಕಿ, ಯಲ್ಲಾಪುರ
ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ಟ ಹಾಗೂ ಧುಂಡಿ ಅವರ ಸಾಧನೆಯಿಂದಾಗಿ ತಾಲೂಕಿನ ಮಂಚಿಕೇರಿ ಇಂದು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಹೆಗ್ಗೋಡಿನ ನೀನಾಸಂ ನಾಟಕಗಳಿಂದ ಪ್ರಭಾವಿತರಾದ ಧುಂಡಿ ತಮ್ಮೂರಿನಲ್ಲೇ ರಾಜರಾಜೇಶ್ವರಿ ರಂಗ ಸಮೂಹವನ್ನು ೧೯೮೧ರಲ್ಲಿ ಸ್ಥಾಪಿಸಿ, ಅದರ ಕರ್ಣಧಾರತ್ವವನ್ನು ಹಿಡಿದು, ಈವರೆಗೂ ಮಂದುವರಿಸಿಕೊಂಡು ಬಂದಿದ್ದಾರೆ.
೭೨ರ ಹರೆಯದ ಚೈತನ್ಯಶೀಲ ಧುಂಡಿ, ತಮ್ಮ ೪೪ ವರ್ಷದ ರಂಗ ಚಟುವಟಿಕೆ ಅವಧಿಯಲ್ಲಿ ೫೦ಕ್ಕೂ ಹೆಚ್ಚಿನ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಪ್ರತಿವರ್ಷವೂ ಮಕ್ಕಳಿಗೆ ರಂಗತರಬೇತಿ ನೀಡಿ, ನಾಟಕ ಪ್ರದರ್ಶಿಸುತ್ತಾರೆ. ೩ ವರ್ಷಗಳ ಕಾಲ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಸಂಘಟನೆ, ನಾಡಿನಾದ್ಯಂತ ನಾಟಕ ಪ್ರದರ್ಶನಗಳ ನೇತೃತ್ವ ವಹಿಸಿದ ಪರಿಣಾಮ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸಂಘ- ಸಂಸ್ಥೆಗಳಿಂದಲೂ ಪ್ರಶಸ್ತಿಗಳು ಅರಸಿ ಬಂದಿವೆ.ಕೇವಲ ನಾಟಕವೊಂದೇ ಅಲ್ಲದೇ, ಸಂಗೀತ, ಯಕ್ಷಗಾನ, ನೃತ್ಯ ಇವುಗಳ ಜತೆ ಸಂವಾದಗೋಷ್ಠಿ ಹೀಗೆ ಎಲ್ಲ ಕ್ಷೇತ್ರಗಳ ಸಂಘಟನೆಯ ಹೊಣೆ ಇವರದ್ದು. ಸಹಕಾರಿ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲಿಯೂ ತೊಡಗಿಸಿಕೊಂಡಿದ್ದಲ್ಲದೇ ಸಿನಿಮಾ ಕ್ಷೇತ್ರದಲ್ಲಿಯೂ ಪಾತ್ರ ನಿರ್ವಹಿಸಿದ್ದು, ಇತ್ತೀಚೆಗೆ ನಿರ್ಮಾಣಗೊಂಡ ರಾಜ್ ಶೆಟ್ಟಿ ನಿರ್ಮಾಣದ ನಟೇಶ್ ಹೆಗಡೆ ನಿರ್ದೇಶನದ ಪೇದ್ರೋ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇವರ ಕಾಲಚಕ್ರ ಎಂಬ ನಾಟಕ ಹಳ್ಳಿಯ ಮನೆಯೊಂದರ ಸನ್ನಿವೇಶದಲ್ಲೇ ನಿರ್ದೇಶಿಸಿದ್ದು, ವಿಶೇಷ. ಅದು ಈಗಾಗಲೇ ೩೦ ಪ್ರದರ್ಶನವನ್ನು ಕಂಡಿದ್ದು, ಈ ನಾಟಕದ ಸಾಮರ್ಥ್ಯ, ನಿರ್ದೇಶನ, ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡ ರಾಮಕೃಷ್ಣ ನಾರಾಯಣ ಭಟ್ಟ ಧುಂಡಿಯವರಿಗೆ ಡಿ. ೨೩ರಂದು ತನ್ನೂರಿನಲ್ಲೇ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ದೊರೆತಿದೆ.