ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜಯನಗರ ಬಡಾವಣೆಯ ಆರ್‌ಟಿಒ ಮಲ್ಲಿಕಾರ್ಜುನ್ ಕಚೇರಿಯಲ್ಲಿ ಮಲ್ಲಿಕಾರ್ಜುನ್ ದಂಪತಿ ವಾದ್ಯಗಳು ಮತ್ತು ಪೂರ್ಣಕುಂಬದ ಮೂಲಕ ಕೋಡಿ ಶ್ರೀಗಳನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು. ರಾಜ್ಯ ರಾಜಕಾರಣದ ಗೊಂದಲವು ಸಂಪೂರ್ಣವಾಗಿ ಬಗೆ ಹರಿಯಲಿದ್ದು ಸುಖಾಂತ್ಯ ವಾಗಲಿದೆ. ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ ಎಂದುಮಾರ್ಮಿಕವಾಗಿ ನುಡಿದರು.ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಸಿದರು.
ಮಠಗಳು ಮೊದಲು ಜಾತಿಯತೆಯಿಂದ ದೂರವಿರಬೇಕು. ಜಾತಿ ಪದ್ಧತಿ ನಾಗರೀಕ ಸಮಾಜಕ್ಕೆ ಅಂಟಿರುವ ಶಾಪ. ಮಠಾಧೀಶರುಗಳು ಮೊದಲು ಜಾತಿ ಸಂಕೋಲೆಗಳಿಂದ ಬರಬಂದು ಜಾತ್ಯತೀತ ಸಮಾಜದ ನಿರ್ಮಾಣಕ್ಕಾಗಿ ಗಟ್ಟಿಯಾಗಿ ನಿಂತಾಗ ಮಾತ್ರ ನಾಗರೀಕ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.
ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಮಾಜಿ ಗೌರವಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ಮುಖಂಡರಾದ ಆಲಂಬಾಡಿ ಕಾವಲು ದೇವರಾಜು, ಜಯರಾಮೇಗೌಡ, ಹೊಸ ಹೊಳಲು ರಘು, ಕಾಮನಹಳ್ಳಿ ಮಂಜುನಾಥ್, ಕ್ರೈಸ್ಟ್ ದ ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವರಾಜ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಮನು ಶರತ್, ಅರಳಕುಪ್ಪೆ ಸೋಮೇಗೌಡ, ಪುರಸಭೆ ಮಾಜಿ ಸದಸ್ಯ ಕೋಳಿ ನಾಗರಾಜು ಸೇರಿದಂತೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಪುರ ಪ್ರಮುಖರು ಉಪಸ್ಥಿತರಿದ್ದರು.