ವಿಜೃಂಭಣೆಯಿಂದ ನಡೆದ ಪುರಾಣ ಪ್ರಸಿದ್ಧ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

KannadaprabhaNewsNetwork | Published : Apr 20, 2025 1:56 AM

ಸಾರಾಂಶ

ಶ್ರೀಮದ್ದೂರಮ್ಮ ಹಾಗೂ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲಗಳಲ್ಲಿ ಕಳೆದ 15 ದಿನಗಳಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಶ್ರೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ಮೂಲ ವಿಗ್ರಹಕ್ಕೆ ಅಭಿಷೇಕ ಪುಷ್ಪಾಲಂಕಾರ ದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಧಾರ್ಮಿಕ ದತ್ತಿ ಇಲಾಖೆ ಪರವಾಗಿ ತಹಸೀಲ್ದಾರ್ ಡಾ.ಸ್ಮಿತಾರಾಮು ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಕೆ.ಎಂ. ಉದಯ್, ಪತ್ನಿ ವಿನುತಾ ಉದಯ್, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್ ಹಾಗೂ ಪುರಸಭೆ ಜನಪ್ರತಿನಿಧಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

ಸ್ಥಳೀಯರು ಸೇರಿದಂತೆ ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

ಶ್ರೀಮದ್ದೂರಮ್ಮ ಹಾಗೂ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲಗಳಲ್ಲಿ ಕಳೆದ 15 ದಿನಗಳಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಶ್ರೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ಮೂಲ ವಿಗ್ರಹಕ್ಕೆ ಅಭಿಷೇಕ ಪುಷ್ಪಾಲಂಕಾರ ದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ನಂತರ ಶ್ರೀ ಲಕ್ಷ್ಮಿನಾರಾಯಣ ರಂಗನಾಯಕಿ ಮತ್ತು ಸೌಮ್ಯ ನಾಯಕಿ ಸಮೇತ ಪುಷ್ಪಾಲಂಕೃತ ಉತ್ಸವ ಮೂರ್ತಿಯನ್ನು ದೇಗುಲದ ಆವರಣದಿಂದ ಮಂಗಳವಾದ್ಯ ಸಮೇತ ಕೋಟೆ ಮೂಲಕ ತೇರಿನ ಬೀದಿಯವರಿಗೆ ಮೆರವಣಿಗೆ ನಡೆಸಲಾಯಿತು.

ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತಾದಿಗಳು ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಧನ್ಯತಾ ಭಾವ ಮೆರೆದರು.

ರಥ ಸಾಗುವ ಮಾರ್ಗದಲ್ಲಿ ವಿವಿಧ ಸಂಘ ಸಂಸ್ಥೆಗಳು ವತಿಯಿಂದ ಅಲ್ಲಲ್ಲಿ ಅರವಟ್ಟಿಗೆಗಳನ್ನು ತೆರೆದು ಭಕ್ತಾದಿಗಳಿಗೆ ಕೋಸಂಬರಿ, ಪಾನಕ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು.

ಮದ್ದೂರಿನ ಶ್ರೀನರಸಿಂಹಸ್ವಾಮಿ ಸೇವಾ ಸಂಘ, ಉಧ್ಯಮಿ ಶಿವಕೃಪ ಡಿಸ್ಟ್ರಿಬ್ಯೂಟರ್ ನ ಮಾಲೀಕರಾದ ಬಿ.ವಿ.ಮಂಜುನಾಥ್, ಬ್ರಾಹ್ಮಣ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ ರಥೋತ್ಸವದ ಅಂಗವಾಗಿ ಕಂದಾಯ ಇಲಾಖೆ ಸಿಬ್ಬಂದಿಯಿಂದ ತೆರಡಿ ಉತ್ಸವ ಜರುಗಿತು.

ರಥೋತ್ಸವದಲ್ಲಿ ಶಿರಸ್ತೇದಾರ್ ಲಕ್ಷ್ಮಿ ನರಸಿಂಹ ನರಸಿಂಹ, ರೂಪ, ಪುರಸಭಾ ಸದಸ್ಯರಾದ ಟಿ.ಆರ್.ಪ್ರಸನ್ನ ಕುಮಾರ್, ಸಚಿನ್, ಸರ್ವಮಂಗಳ, ಬಸವರಾಜು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ಅರೇಚಾಕನಹಳ್ಳಿಯಲ್ಲಿ ಏ.20 ರಿಂದ ಶ್ರೀಶಂಭುಲಿಂಗೇಶ್ವರಸ್ವಾಮಿ ಪೂಜಾ ಮಹೋತ್ಸವ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಅರೇಚಾಕನಹಳ್ಳಿಯಲ್ಲಿ ಏ.20 ರಿಂದ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಶಂಭುಲಿಂಗೇಶ್ವರಸ್ವಾಮಿ ವಿಶೇಷ ಪೂಜಾ ಮಹೋತ್ಸವ ಮತ್ತು ಕೊಂಡೋತ್ಸವ ಆರಂಭಗೊಳ್ಳಲಿದೆ.

ಶ್ರೀಶಂಭುಲಿಂಗೇಶ್ವರಸ್ವಾಮಿ, ಶ್ರೀಕದಗಾರಲಿಂಗೇಶ್ವರ ಮತ್ತು ಶ್ರೀದೇವಮ್ಮ ದೇವರುಗಳು ಉತ್ಸವ ಹಾಗೂ ಶ್ರೀಭೈರವೇಶ್ವರ ದೇವರ ಕೋಂಡೋತ್ಸವದ ಹಿನ್ನೆಲೆಯಲ್ಲಿ ಏ.20 ರಂದು ಭಾನುವಾರ ಸಾಯಂಕಾಲ ಬಂಡಿ ಉತ್ಸವ ಜರುಗಲಿದೆ.

ಏ.21ರಂದು ಸೋಮವಾರ ಬೆಳಗಿನ ಜಾವ ಬಾಯಿಬೀಗ, ಕೊಂಡೋತ್ಸವ, ಮುಡಿಸೇವೆ. ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ ಬಸವಪ್ಪ, ಕೆ.ಶೆಟ್ಟಹಳ್ಳಿ ಶ್ರೀ ಬೊಮ್ಮಲಿಂಗೇಶ್ವರ ಬಸವಪ್ಪ, ಶ್ರೀಭೈರವೇಶ್ವರ ಮತ್ತು ಶ್ರೀಮಾರಮ್ಮ ದೇವರ ಪೂಜೆ ಮತ್ತು ಕರಡಕೆರೆ ಆಂಜನೇಯಸ್ವಾಮಿ ಬಸಪ್ಪನವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಬೆಂಗಳೂರಿನ ಮರಿಯಪ್ಪನ ಪಾಳ್ಯ, ಸಾವಂದಿಪುರ, ಸಾಮಂದಿಪುರ ಅರೆಕಲ್‌ದೊಡ್ಡಿ, ಕಳ್ಳಮೆಳೆದೊಡ್ಡಿ, ಮುಟ್ಟನಹಳ್ಳಿ, ಗುರುದೇವರಹಳ್ಳಿ, ಗುವ್ವಾಪುರ, ಹಾಡ್ಲಿ, ಯಡಗನಹಳ್ಳಿ, ಕಡಿಲುವಾಗಿಲು, ಆಲದಹಳ್ಳಿ, ಮಾದರಹಳ್ಳಿ, ಮಂಡ್ಯ ಹೊಸಹಳ್ಳಿ, ದೇವರಹಳ್ಳಿ, ಕೆ.ಪಿ.ದೊಡ್ಡಿ, ಮೈಸೂರು, ಎಲೆತೋಟದಹಳ್ಳಿ, ಉಪ್ಪಗೆರೆದೊಡ್ಡಿ, ಕಾಡುಕೊತ್ತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ದೇವರ ಕುಲದವರು ಆಗಮಿಸಲಿದ್ದಾರೆ.

ಅರೇಚಾಕನಹಳ್ಳಿಯ ಶ್ರೀಭೈರವೇಶ್ವರಸ್ವಾಮಿ ಮತ್ತು ಶ್ರೀಶಂಭುಲಿಂಗೇಶ್ವರಸ್ವಾಮಿ ಮತ್ತು ಶ್ರೀದೇವಮ್ಮ ಕದಗಾರಲಿಂಗೇಶ್ವರ ಮತ್ತು ಶ್ರೀಮಾರಮ್ಮ, ಶ್ರೀಶನಿದೇವರುಗಳ ಬಿರುದುಗಳು ಮತ್ತು ವಿಶೇಷ ಪೂಜಾ ಮಹೋತ್ಸವವನ್ನು ಬಸಪ್ಪಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.

ಬೆಂಗಳೂರು ಭಕ್ತಾದಿಗಳಿಂದ ಶ್ರೀಶಂಭುಲಿಂಗೇಶ್ವರ ಸ್ವಾಮಿ ಮತ್ತು ಎಲ್ಲಾ ದೇವರುಗಳಿಗೆ ಹೂವಿನ ಅಲಂಕಾರವಿರುತ್ತದೆ. ಸಾವಂದಿಪುರ ಮತ್ತು ಸಾಮಂದಿಪುರ ಭಕ್ತಾದಿಗಳಿಂದ ಕೊಂಡದ ಸೌದೆ ಉತ್ಸವ ಇದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

Share this article