ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಭಾಷಣ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದಾಗ, ಅವರನ್ನು ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ಹಿಂದಕ್ಕೆ ಕಳುಹಿಸಿದ್ದಾರೆ.ಸೌಜನ್ಯ ಪರ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಹಾಗೂ ಪುನೀತ್ ಕೆರಹಳ್ಳಿ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆದಿತ್ತು. ಪುನೀತ್ ಕೆರಹಳ್ಳಿ ಉಜಿರೆಗೆ ಬಂದರೆ ಗಲಭೆಯಾಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿ ಉಜಿರೆಗೆ ಪ್ರವೇಶ ನಿಷೇಧಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.ಶನಿವಾರ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ ಪುನೀತ್ ಕೆರಹಳ್ಳಿ ಅವರನ್ನು ಪೊಲೀಸರು ತಡೆದಿದ್ದು, ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪುನೀತ್ ಹಾಗೂ ತಂಡವನ್ನು ಹಿಂದಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುನೀತ್ ಕೆರೆಹಳ್ಳಿ ಬರುವ ಮಾಹಿತಿ ತಿಳಿದು ಮಹೇಶ್ ಶೆಟ್ಟಿ ಬೆಂಬಲಿಗರು ಉಜಿರೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.ಬಾಕ್ಸ್‌ಮಾತಿನ ಚಕಮಕಿ
ಉಜಿರೆಯಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ರಾಮೋತ್ಸವ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕ ಎಸ್. ವಿಜಯ ಪ್ರಸಾದ್ ಮತ್ತು ತಂಡ ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡ ಹಾಕಿ, ದ.ಕ. ಪ್ರವೇಶ ನಿಷೇಧ ಮಾಡಿದ ಜಿಲ್ಲಾಧಿಕಾರಿ ಆದೇಶ ತೋರಿಸಿ ತಡೆದು ವಾಪಸ್ ಹೋಗುವಂತೆ ಮನವಿ ಮಾಡಿದರು. ಈ ಸಂದರ್ಭ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ ಕಾರಣ ಮಾತಿನ ಚಕಮಕಿ ನಡೆಯಿತು. ಇದಕ್ಕೂ ಮೊದಲು ಪುನೀತ್ ಅವರು ಕಾರಿನ ಮೇಲೆ ನಿಂತು ತಾಕತ್ತಿದ್ದರೆ ತನ್ನನ್ನು ತಡೆಯುವಂತೆ ಸವಾಲು ಹಾಕಿದ್ದರು.ಉಜಿರೆ ಪೇಟೆಯಲ್ಲಿ ಕೆಲ ಕಾಲ ಪ್ರಕ್ಷುಬ್ದ ವಾತಾವತರಣ ಕಂಡು ಬಂತು. ಪೊಲೀಸರ ಸಕಾಲಿಕ ನಡವಳಿಕೆಯಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.