ಸಮನ್ವಯ ಸಮಿತಿ ಸಭೆ
ಸ್ವಾರ್ಥ ಹಿತಾಸಕ್ತಿಗಾಗಿ ದೇಶ ವಿಭಜನೆ ಹುನ್ನಾರ ನಡೆಸಿರುವ ದುಷ್ಟ ಕೂಟದ ದುರುಳ ಶಕ್ತಿಗಳನ್ನು ಮಟ್ಟಹಾಕಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸೋಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದರು.
ನಗರದ ಸುಭಾಷ ನಗರ ಬಡಾವಣೆಯ ಶಾಂತವೀರಮ್ಮ ಪರಮೇಶ್ವರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಭಾರತದ ಅಸ್ಮಿತೆಯನ್ನು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಪರಿಚಯಿಸಿದ್ದು ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎನ್‌ಡಿಎ ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ. ತೆರಿಗೆ ಹಣ ನೀಡಿಲ್ಲ ಎನ್ನುವ ಆಧಾರ ರಹಿತ ವಾದಗಳನ್ನು ಮುಂದಿಡುತ್ತಿರುವ ಕೆಲವರು ತಮ್ಮ ಸ್ವಾರ್ಥಕ್ಕಾಗಿ ದೇಶ ವಿಭಜನೆಯ ಮಾತು ಆಡುತ್ತಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.ಭವಿಷ್ಯದ ಭವ್ಯ ಭಾರತದ ಕನಸಿಗೆ ಕೊಡಲಿ ಏಟು ನೀಡಲು ಹೊರಟಿರುವ ದುಷ್ಟ ಶಕ್ತಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪೆಯಿಂದ ಬೆಳದವರು ಎಲ್ಲವನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದು ಕಾಲವೇ ಅವರಿಗೆ ಉತ್ತರಿಸಲಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಉಭಯ ಪಕ್ಷಗಳ ಮುಖಂಡರು ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ದೈತ್ಯಶಕ್ತಿಯಾಗಿದ್ದಾರೆ. ಮನೆ ಮನೆಗೆ ಗಂಗೆ, ಮುದ್ರಾ ಯೋಜನೆ ಸೇರಿ ಲೆಕ್ಕವಿಲ್ಲದಷ್ಟು ಜನಪರ ಕೆಲಸ ಮಾಡಿರುವುದು ಜಗಜ್ಜಾಹೀರಾಗಿದೆ. ಉಭಯ ನಾಯಕರಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪ್ರಜ್ವಲ್ ರೇವಣ್ಣ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲ್ಲಿಸೋಣ ಎಂದರು.
ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ಸಂಜೆ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದರು.
ಅರಸೀಕೆರೆಯ ಸುಭಾಷ ನಗರ ಬಡಾವಣೆಯಲ್ಲಿರುವ ಶಾಂತವೀರಮ್ಮ ಪರಮೇಶ್ವರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು.