ನಿಫಾ ಸೋಂಕಿತನ ಆರೈಕೆ ಮಾಡಿದ ಕಡಬದ ನರ್ಸ್‌ ಬದುಕಿಗೇ ಸಂಕಷ್ಟ : 8 ತಿಂಗಳಿಂದ ಕೋಮಾದಲ್ಲಿ

KannadaprabhaNewsNetwork |  
Published : Jul 30, 2024, 12:35 AM ISTUpdated : Jul 30, 2024, 12:06 PM IST
32 | Kannada Prabha

ಸಾರಾಂಶ

ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲೇ ಚಿಕಿತ್ಸೆಗೆ ಒಳಗಾಗುತ್ತಿರುವ ಹೃದಯ ವಿದ್ರಾವಕ ಘಟನೆ ವಿಳಂಬವಾಗಿ ಬೆಳಕಿಗೆ ಬಂದಿದೆ.  

ಉಪ್ಪಿನಂಗಡಿ: ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲೇ ಚಿಕಿತ್ಸೆಗೆ ಒಳಗಾಗುತ್ತಿರುವ ಹೃದಯ ವಿದ್ರಾವಕ ಘಟನೆ ವಿಳಂಬವಾಗಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್ (24) ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ.

ಪ್ರಕರಣದ ಹಿನ್ನೆಲೆ:

ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್‌ನ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ 2023 ರಿಂದ ನರ್ಸ್ ಆಗಿದ್ದಾರೆ. 2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಹೊಂದಿದ್ದ ರೋಗಿಯ ಆರೈಕೆ ಮಾಡಿದ್ದಾರೆ ಎನ್ನಲಾಗಿದೆ.

ಬಳಿಕ ಕ್ವಾರಂಟೈನ್ ನಲ್ಲಿದ್ದ ಟಿಟ್ಟೋ ಥಾಮಸ್ ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಡಿಸೆಂಬರ್ ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಕೋಮಾಗೆ ಜಾರಿದ್ದಾರೆ ಎನ್ನಲಾಗಿದೆ. ನಂತರದ ದಿನಗಳಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದಲೇ ಚಿಕಿತ್ಸೆ ನೀಡಲಾಗಿದೆ.

ಕಳೆದ ಎಂಟು ತಿಂಗಳಲ್ಲಿ ಯಾವುದೇ ಫಲ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಚಾರಿಸಿದಾಗ ಆಡಳಿತ ಮಂಡಳಿಯು ಈಗಾಗಲೇ 40 ಲಕ್ಷ ರು.ಗಳಷ್ಟು ಖರ್ಚನ್ನು ಭರಿಸಿದ್ದು, ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಇನ್ಮುಂದೆ ನಿಭಾಯಿಸುವುದು ಕಷ್ಟ ಎಂದು ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ.

ನಿಫಾ ವೈರಸ್ ಬಾಧಿಸಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಕೇರಳ ಸರ್ಕಾರದ ಮೊರೆ ಹೋಗಿದ್ದು, ಸರಕಾರದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ನಿಫಾ ಸೋಂಕಿನಿಂದ ತತ್ತರಿಸಿರುವ ಟಿಟ್ಟೋ ಥಾಮಸ್ ನ ಪ್ರಾಣ ಉಳಿಸುವ ಸಲುವಾಗಿ ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕಳೆದ ಎಂಟು ತಿಂಗಳಿನಿಂದ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಅಲೆದಾಡುವುದೇ ದೈನಂದಿನ ಕಾಯಕವಾಗಿದೆ. ರೋಗಿಯೊಬ್ಬರ ಆರೈಕೆ ಮಾಡಿ ತಾನೇ ರೋಗಕ್ಕೆ ತುತ್ತಾಗಿ ಕಳೆದ ಎಂಟು ತಿಂಗಳುಗಳಿಂದ ಬೇರೆಯವರ ಆರೈಕೆಯಿಂದ ದಿನ ಕಳೆಯುತ್ತಿರುವುದು ಕುಟುಂಬಸ್ಥರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಎಂಟು ತಿಂಗಳ ಹಿಂದೆ ಕೋಮಾವಸ್ಥೆಗೆ ಜಾರಿದ ತಮ್ಮನ ಆರೋಗ್ಯ ಇಂದಲ್ಲ ನಾಳೆ ಸರಿಯಾಗಬಹುದೆಂಬ ಭರವಸೆಯಲ್ಲಿ ಇಷ್ಟು ಸಮಯ ಕಾದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸರ್ಕಾರದ ಗಮನಕ್ಕೆ ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ನಿಲ್ಲಬೇಕಾದ ಅನಿವಾರ್ಯತೆಯಿಂದ ಮಾಡುತ್ತಿದ್ದ ಕೆಲಸಕ್ಕೂ ರಾಜೀನಾಮೆ ನೀಡಿ ಆಸ್ಪತ್ರೆಯಲ್ಲೇ ಉಳಿಯುವಂತಾಗಿದ್ದು, ಕೇರಳ ಸರಕಾರವು ಉನ್ನತ ಮಟ್ಟದ ಚಿಕಿತ್ಸೆಗೆ ನೆರವಾದರೆ ನನ್ನ ಸಹೋದರನ ಪ್ರಾಣ ಉಳಿಸಬಹುದಾಗಿದೆ.

-ಶಿಜೋ ಜಾಯ್‌, ಅನಾರೋಗ್ಯಪೀಡಿತರ ಸಹೋದರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ದಾಳಿಗೆ ಮೇಕೆ ಬಲಿ: ಅರಣ್ಯ ಇಲಾಖೆ ಎದುರು ಪ್ರತಿಭಟನೆ
ಸತ್ಯಾಗ್ರಹ ಸೌಧ ಅಭಿವೃದ್ಧಿ: ನೀಲನಕ್ಷೆ ತಯಾರಿಗೆ ಪರಿಶೀಲನೆ