ಸೆ.೪ಕ್ಕೆ ಗಣಿಬಾಧಿತ ಜನರ ಬದುಕು, ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶ

KannadaprabhaNewsNetwork |  
Published : Aug 28, 2024, 12:54 AM IST
ಸ | Kannada Prabha

ಸಾರಾಂಶ

೩ ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಹೋರಾಟ ಕುರಿತು ಸಂಸದೆ ಕಂಗನಾ ರಾಣಾವತ್ ಅವರು ನೀಡಿರುವ ಹೇಳಿಕೆಯನ್ನು ರೈತ ಸಂಘ ಖಂಡಿಸುತ್ತದೆ.

ಸಂಡೂರು: ಪಟ್ಟಣದ ಆದರ್ಶ ಸಮುದಾಯ ಕೇಂದ್ರದಲ್ಲಿ ಸೆ.೪ರಂದು ಬೆಳಿಗ್ಗೆ ೧೦ ಗಂಟೆಗೆ ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿಯಿಂದ ಸಂಡೂರು, ಬಳ್ಳಾರಿ ಹಾಗೂ ಹೊಸಪೇಟೆ ಗಣಿ ಬಾಧಿತ ಪ್ರದೇಶದ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಆರ್ ಮಾಧವರೆಡ್ಡಿ ಕರೂರು ಅವರು ತಿಳಿಸಿದರು.

ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಜನ ಸಂಗ್ರಾಮ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜನರ ಸಂಕಲ್ಪ ಸಮಾವೇಶದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಪತ್ರಕರ್ತರು ಹಾಗೂ ಪರಿಸರ ಹೋರಾಟಗಾರರಾದ ನಾಗೇಶ್ ಹೆಗ್ಡೆ ಹಾಗೂ ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ್ ಚಾಲನೆ ನೀಡಲಿದ್ದಾರೆ. ಅಂದು ನಡೆಯುವ ವಿವಿಧ ಗೋಷ್ಠಿಗಳಲ್ಲಿ ನಾಗೇಶ್ ಹೆಗ್ಡೆ, ಎಸ್.ಆರ್. ಹಿರೇಮಠ್, ರಾಘವೇಂದ್ರ ಕುಷ್ಟಗಿ, ಅಖಿಲೇಶ್ ಚಿಪ್ಳಿ, ಸಂತೋಷ್ ಮಾರ್ಟಿನ್, ಟಿ.ಆರ್. ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಇಂದೂಧರ ಹೊನ್ನಾಪುರ ಅವರು ವಿವಿಧ ವಿಷಯಗಳ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.

ಚಾಮರಸ ಮಾಲೀಪಾಟೀಲ್, ಉಗ್ರ ನರಸಿಂಹೇಗೌಡ, ರವಿಕ್ರಿಷ್ಣಾರೆಡ್ಡಿ ಸೇರಿದಂತೆ ಹಲವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಧೀರ್ ಶೆಟ್ಟಿ ಅವರಿಂದ ಸಂಡೂರಿನ ಪರಿಸರದ ಬಗ್ಗೆ ಕಿರುಚಿತ್ರ ಹಾಗೂ ಛಾಯಚಿತ್ರ ಪ್ರದರ್ಶನವೂ ನಡೆಯಲಿದೆ. ಸಮಾವೇಶ ಕುರಿತಂತೆ ಗಣಿ ಬಾಧಿತ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಂಗನಾ ರಾಣಾವತ್ ಹೇಳಿಕೆಗೆ ಖಂಡನೆ : ೩ ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಹೋರಾಟ ಕುರಿತು ಸಂಸದೆ ಕಂಗನಾ ರಾಣಾವತ್ ಅವರು ನೀಡಿರುವ ಹೇಳಿಕೆಯನ್ನು ರೈತ ಸಂಘ ಖಂಡಿಸುತ್ತದೆ. ಅವರ ಸದಸ್ಯತ್ವವನ್ನು ರದ್ದುಗೊಳಿಸಲು ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಯವರನ್ನು ಒತ್ತಾಯಿಸುತ್ತೇವೆ ಎಂದರು.

ವಿವಿಧ ಗ್ರಾಮಗಳಲ್ಲಿ ಜಾಗೃತಿ:

ಸೆ.೪ರಂದು ನಡೆಯುವ ಸಂಕಲ್ಪ ಸಮಾವೇಶ ಹಾಗೂ ಗಣಿ ಬಾಧಿತ ಪ್ರದೇಶದ ಜನತೆ ಕೆಎಂಇಆರ್‌ಸಿ (ಕರ್ನಾಟಕ ಮೈನಿಂಗ್ ಎನ್ವಿರಾನ್‌ಮೆಂಟ್ ರೆಸ್ಟೊರೇಷನ್ ಕಾರ್ಪೊರೇಷನ್) ನಲ್ಲಿ ಸಂಗ್ರಹವಾಗಿರುವ ೨೫ ಸಾವಿರ ಕೋಟಿ ಹಣವನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆ, ಆ ಮೂಲಕ ತಮ್ಮ ಬದುಕನ್ನು ಹಸನುಮಾಡಿಕೊಳ್ಳುವುದು, ಈ ಯೋಜನೆಯಡಿ ವಿವಿಧ ಕೃಷಿ, ಗುಡಿ ಕೈಗಾರಿಕೆ, ಹೈನುಗಾರಿಕೆ, ಶಿಕ್ಷಣ, ವಸತಿ ಮುಂತಾದ ಜನರ ಬದುಕಿನ ಅವಶ್ಯಕತೆಗಳನ್ನು ಪಡೆದುಕೊಳ್ಳುವ ಅರ್ಜಿಗಳನ್ನು ನೀಡುವ ಕುರಿತಂತೆ ಜಾಗೃತಿ ಜಾಥಾದ ಮೂಲಕ ಯಶವಂತನಗರ, ಸ್ವಾಮಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಜಾಗೃತಿ ಜಾಥಾದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಎಂ.ಎಲ್.ಕೆ. ನಾಯ್ಡು, ಜಿ.ಕೆ. ನಾಗರಾಜ, ಕಾಶಪ್ಪ, ಮೂಲಿಮನೆ ಈರಣ್ಣ, ಪರಮೇಶ್ವರಪ್ಪ ಮುಂತಾದವರು ಭಾಗವಹಿಸಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!