ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಾರಾಷ್ಟ್ರದ ಮಹಾಬಳೇಶ್ವರದಿಂದ ಅರಬ್ಬಿ ಸಮುದ್ರದವರೆಗೆ ಹರಿಯುವ ಕೃಷ್ಣಾ ನದಿಗೆ ಕಾಶಿಯಿಂದ ಆಗಮಿಸಿದ್ದ ಅರ್ಚಕರು ಹಾಗೂ ಪಂಡಿತರು ವಿಶೇಷ ಕೃಷ್ಣಾರತಿ ನೆರವೇರಿಸುವ ಮೂಲಕ ನದಿಗೆ ಗೌರವ ಸಮರ್ಪಿಸಿದರು. ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಸಮೀಪ ಉತ್ತರಾಭಿಮುಖವಾಗಿ ಹರಿಯುತ್ತಿರುವ ಕೃಷ್ಣಾ ನದಿಯ ತಟದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಈ ಅಪೂರ್ವ ಕಾರ್ಯಕ್ರಮಕ್ಕೆ ಸಾವಿರಾರು ಜನ ಭಕ್ತಿಗೆ ಸಾಕ್ಷಿಯಾಯಿತು.
ಗಂಗಾರತಿ ಮಾದರಿಯಲ್ಲಿ ಕಂಗೊಳಿಸಿದ ಕೃಷ್ಣಾ ತೀರ:ಕುಂಭಮೇಳ ಹಾಗೂ ಕಾಶಿಯ ಗಂಗಾರತಿ ಮಾದರಿಯಲ್ಲಿ ನಡೆದ ಕೃಷ್ಣಾ ಆರತಿ ಕಾರ್ಯಕ್ರಮಕ್ಕೆ ಕೃಷ್ಣಾ ನದಿಯ ಎಡ ಮತ್ತು ಬಲ ದಂಡೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಮಹಿಳೆಯರು, ಯುವಕರು ಹಾಗೂ ಯುವತಿಯರು ಆಗಮಿಸಿದ್ದರು. ಸಂಜೆ ವೇಳೆಗೆ ನದಿತೀರ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಕಾಶಿಯಿಂದ ಆಗಮಿಸಿದ್ದ ಆಚಾರ್ಯ ರಣಧೀರಜೀ ಅವರ ನೇತೃತ್ವದ 11 ಜನರ ತಂಡ ಶಂಖನಾದದೊಂದಿಗೆ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಶಂಖನಾದ, ಮಂತ್ರಘೋಷ ಹಾಗೂ ಆರತಿಯ ಬೆಳಕಿನಿಂದ ಕೃಷ್ಣಾ ತೀರದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ಆರತಿಯನ್ನು ಕಣ್ತುಂಬಿಕೊಂಡರು.
ಕಂಕಣವಾಡಿ, ಮೈಗೂರ ಹಾಗೂ ಮುತ್ತೂರ ಗ್ರಾಮಗಳಿಂದ ತರಿಸಲಾಗಿದ್ದ ಬೋಟ್‌ಗಳಲ್ಲಿ ಶ್ರೀಗಳು, ಪಂಡಿತರು, ಅರ್ಚಕರು, ಮುತ್ತೈದೆಯರು ಹಾಗೂ ಗಣ್ಯರೊಂದಿಗೆ ಸಂಗಮೇಶ ನಿರಾಣಿ ಅವರು ನದಿಗೆ ಬಾಗಿನ ಅರ್ಪಿಸಿದರು. ವಿಶೇಷ ಪೂಜೆ ಸಲ್ಲಿಸಿ ನದಿಗೆ ಗೌರವ ಸಮರ್ಪಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ಆರತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ನದಿಯ ತಟದಲ್ಲಿ ಸಾವಿರಾರು ದೀಪಗಳ ಬೆಳಕು, ಭಕ್ತರ ಘೋಷಣೆ ಹಾಗೂ ಆರತಿಯ ದೃಶ್ಯ ಮನಮೋಹಕವಾಗಿತ್ತು.
ಕೃಷ್ಣಾರತಿ ಅಂಗವಾಗಿ ಕಲಾತಂಡಗಳಿಂದ ನಡೆದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ರಂಜಿಸಿದವು. ಧಾರ್ಮಿಕ ವಾತಾವರಣದೊಂದಿಗೆ ಸಾಂಸ್ಕೃತಿಕ ವೈಭವವೂ ಮೇಳೈಸಿ ಕಾರ್ಯಕ್ರಮ ವಿಶೇಷಗೊಳಿಸಿತು. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಕೃಷ್ಣಾರತಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅದು ಉತ್ತರ ಕರ್ನಾಟಕದ ಕೃಷಿ, ಸಂಸ್ಕೃತಿ, ಬದುಕು ಹಾಗೂ ಭಾವನೆಗಳ ಜೀವನಾಡಿ ಎಂಬ ಸಂದೇಶವನ್ನು ಸಾರಿದ ಕೃಷ್ಣಾರತಿ, ಹಿಪ್ಪರಗಿ ಗ್ರಾಮದ ಕೃಷ್ಣಾ ತೀರದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಭಕ್ತಿಯ ಕ್ಷಣಗಳಿಗೆ ಸಾಕ್ಷಿಯಾಯಿತು.