ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮ ಐಸಿಯುನಲ್ಲಿದೆ

KannadaprabhaNewsNetwork | Published : Jan 10, 2024 1:46 AM

ಸಾರಾಂಶ

ಜಗಜ್ಯೋತಿ ಶ್ರೀ ಬಸವೇಶ್ವರ ವಿಶೇಷ ಅಂಚೆ ಕಾರ್ಡ್ ಬಿಡುಗಡೆ

- - ಶ್ರೀ ನಿಜಗುಣಾನಂದ ಸ್ವಾಮೀಜಿ ಕಳವಳ - ಜಗಜ್ಯೋತಿ ಶ್ರೀ ಬಸವೇಶ್ವರ ವಿಶೇಷ ಅಂಚೆ ಕಾರ್ಡ್ ಬಿಡುಗಡೆ

----ಕನ್ನಡಪ್ರಭ ವಾರ್ತೆ ಮೈಸೂರು

ಬಸವಣ್ಣ ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮ ಅಪಾಯಕಾರಿ ಸ್ಥಿತಿಯಲ್ಲಿದೆ. ಲಿಂಗಾಯತ ಧರ್ಮ ಐಸಿಯುನಲ್ಲಿದೆ ಎಂದು ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದ ಹೊಸಮಠದ ನಟರಾಜ ಸಭಾ ಭವನದಲ್ಲಿ ಬಸವಭಾರತ ಪ್ರತಿಷ್ಠಾನವು ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ವಿಶೇಷ ಅಂಚೆ ಕಾರ್ಡ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಸವಣ್ಣ ಅವರು ಧರ್ಮಾತೀತವಾಗಿ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಜಗತ್ತಿಗೆ ಪರಿಚಯಿಸಲು ವಿಫಲರಾಗಿದ್ದೇವೆ. ಹೀಗಾಗಿ, ಲಿಂಗಾಯತ ಧರ್ಮವನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಏನೆಲ್ಲಾ ಮಾಡಿದ್ದರು ಎಂಬುದನ್ನು ನಾವೆಲ್ಲಾ ಮರೆತಿದ್ದೇವೆ. ಲಿಂಗಾಯತ ಎಂಬುದು ಕೇವಲ ಜಾತಿ, ಧರ್ಮವಲ್ಲ, ಅದು ಮಾನವ ಹಕ್ಕಿನ ಪ್ರತಿಪಾದಕವಾಗಿದೆ. ಜಗತ್ತಿನಲ್ಲಿ ದೇವರು ಮತ್ತು ಧರ್ಮವನ್ನು ಮೀರಿ ಮನುಷ್ಯರ ಬಗ್ಗೆ ಮಾತನಾಡಿದ್ದು, ಬಸವಣ್ಣನವರು ಅವರು ಕೇವಲ ಒಂದು ಜಾತಿ, ಧರ್ಮಕ್ಕೆ ಸಿಮೀತವಾದವರಲ್ಲ ಎಂದು ಅವರು ತಿಳಿಸಿದರು.

ದೇವರು, ಧರ್ಮದಿಂದ ದೂರವಾದವರನ್ನು ಒಗ್ಗೂಡಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಇಡೀ ಭಾರತ ದೇಶವನ್ನು ಉಳಿಸಿದ ರಾಷ್ಟ್ರ ಧರ್ಮವೆಂದರೆ ಅದು ಲಿಂಗಾಯತ ಧರ್ಮವಾಗಿದೆ. ಅನುಭವ ಮಂಟಪದಿಂದ ತಳ ಸಮುದಾಯದವರನ್ನು ಒಂದೂಗೂಡಿಸಿ ಹಿಂದೂ ಧರ್ಮವನ್ನು ಉಳಿಸುವ ಪ್ರಯತ್ನವನ್ನು ಬಸವಣ್ಣನವರು ಆ ಕಾಲದಲ್ಲಿಯೇ ಮಾಡಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯುಯನ ಸಂಸ್ಥೆಯ ನಿರ್ದೇಶಕಿ ಪ್ರೊ. ವಿಜಯಕುಮಾರಿ ಕರಿಕಲ್, ಜಿ.ಎ. ಶಿವಲಿಂಗಯ್ಯ, ಪ್ರೊ.ಸಿ. ನಾಗಣ್ಣ, ಶಿವಲಿಂಗಪ್ಪ, ಜವರಪ್ಪ, ಶೈಲಜಾ ತಿಪ್ಪೇರುದ್ರಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಕುದೇರು ಗುರುಮಲ್ಲೇಶ್ವರ ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಎನ್.ಆರ್. ಪುರದ ಶ್ರೀ ಬಸವಯೋಗಿ ಪ್ರಭುಸ್ವಾಮಿ, ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜಲ್ ರಾಜ್, ಮಾಜಿ ಶಾಸಕರಾದ ತೋಂಟದಾರ್ಯ, ನಿರಂಜನ್ ಕುಮಾರ್, ಪ್ರಗತಿ ಪರ ಕೃಷಿಕ ಶರಣ ಪ್ರಶಾಂತ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ. ಪ್ರದೀಪ್ ಕುಮಾರ್, ಕೆ.ವಿ. ಮಲ್ಲೇಶ್ ಮೊದಲಾದವರು ಇದ್ದರು.

Share this article