ಬ್ಯಾಡಗಿ: ಪಟ್ಟಣದಲ್ಲಿನ ನಿವೇಶನ ರಹಿತ ಬಡವರ ಬಹುದಿನದ ಸೂರಿನ ಕನಸು ಈಡೇರಲಿದ್ದು, ಮಲ್ಲೂರ ರಸ್ತೆಯಲ್ಲಿನ 10 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ನ. 3ರಂದು ವಸತಿ ಸಚಿವ ಬಿ.ಝೆಡ್. ಜಮೀರ ಅಹಮ್ಮದ ಖಾನ್ ಆಗಮಿಸಲಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣವರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷದಿಂದ ಪಟ್ಟಣದ ಬಡವರು ನಿವೇಶನಕ್ಕಾಗಿ ಪರದಾಡಿದ್ದು ಅಷ್ಟಿಷ್ಟಲ್ಲ, ಇದರ ಅರಿವು ನನಗಿದೆ, ಅವರ ನೋವಿಗೆ ಸ್ಪಂದಿಸುವ ಕೆಲಸವನ್ನ ಆಶ್ರಯ ಸಮಿತಿ ಸದಸ್ಯರು ಹಾಗೂ ನಾನು ಮಾಡಿದ್ದು, ಹಲವು ದಿನಗಳ ಸತತ ಪ್ರಯತ್ನದ ನಂತರ ಇದೀಗ ನಿವೇಶನ ಹಂಚಿಕೆ ಮಾಡಲು ನಮ್ಮ ಸರಕಾರ ಮುಂದಾಗಿದ್ದು ಜನತೆಯ ಕನಸು ಈಡೇರಲಿದೆ ಎಂದರು.
ಪ್ರಾಮಾಣಿಕ ಕೆಲಸ: ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಯರೇಶಿಮಿ ಮಾತನಾಡಿ, 10 ವರ್ಷದಿಂದ ನನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಅತ್ಯಂತ ಕಗ್ಗಂಟಾಗಿದ್ದ ಈ ಕೆಲಸವನ್ನು ಅರ್ಹ ಬಡವರನ್ನು ಗುರುತಿಸಿ ನಿವೇಶನ ಹಕ್ಕು ಪತ್ರ ನೀಡುತ್ತಲಿದ್ದೇವೆ. ಇದರಲ್ಲಿ ಆಶ್ರಯ ಸಮಿತಿ ಸದಸ್ಯರು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದು, ಎಲ್ಲ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನಬಸಪ್ಪ ಹುಲ್ಲತ್ತಿ, ನಾಗರಾಜ ಆನ್ವೇರಿ, ರಮೇಶ ಸುತ್ತಕೋಟಿ, ಬೀರಪ್ಪ ಬಣಕಾರ, ದುರ್ಗೆಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ಸೋಮಣ್ಣ ಸಂಕಣ್ಣನವರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.