ಗದಗ: ಮನುಷ್ಯನ ದುರಾಸೆಗೆ ಪ್ರಕೃತಿ ನಾಶವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಪರಿಸರ ನಾಶದಿಂದ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಪತ್ತುಗಳಿಗೆ ಕಾರಣವಾಗಿದೆ. ಭೂಮಿಯ ಮೇಲೆ ಪ್ರತಿಯೊಬ್ಬರೂ ನೆಮ್ಮದಿಯಾಗಿ ಇರಲು ಮನೆಗೊಂದು ಮರ ಬೆಳೆಸಿ ಹಾಗೂ ಗೋವು ಸಾಕಬೇಕು ಎಂದು ನರಸಾಪುರ ಅನ್ನದಾನೀಶ್ವರ ಶಾಖಾ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ಹೇಳಿದರು.
ಬೆಟಗೇರಿಯ ಶ್ರೀ ಬಚ್ಚಲಕಮ್ಮ ದೇವಿ ದೇವಸ್ಥಾನದಲ್ಲಿ ವೃಕ್ಷಭಾರತಿ ಸೇವಾ ಸಮಿತಿ ವತಿಯಿಂದ ಜರುಗಿದ 7ನೇ ವರ್ಷದ ತುಳಸಿ ವಿವಾಹ ಪೂರ್ವ ತುಳಸಿ ಸಸಿಗಳ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಜನರಿಗೆ ತುಳಸಿ ಸಸಿ ವಿತರಿಸಿ ಅವರು ಮಾತನಾಡಿದರು. ಆಧುನಿಕತೆಯ ಭರಾಟೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಹಣ, ಸಂಪತ್ತು ಎಲ್ಲವೂ ಇದೆ. ಆದರೆ ತಿನ್ನಲು ಬಾಯಿ ಇಲ್ಲ. ಯಾರಿಗೂ ನೆಮ್ಮದಿ ಇಲ್ಲ ಎಂಬುದು ಅಷ್ಟೇ ಸತ್ಯ. ಅದಕ್ಕೆ ಕಾರಣ ನಾವು ಭಾರತೀಯ ಸಂಪ್ರದಾಯ ಪರಂಪರೆ ಮರೆತಿರುವುದು. ನಮ್ಮ ಪೂರ್ವಜರು ಮನೆಗಳಲ್ಲಿ ಗೋವು ಸಾಕುತ್ತಿದ್ದರು. ಗೋ ಆಧಾರಿತ ಕೃಷಿ ಮಾಡುತ್ತಿದ್ದರು. ಯಜ್ಞ ಯಾಗಾದಿ ಮಾಡುತ್ತಿದ್ದರು. ಇದರಿಂದ ಆರೋಗ್ಯ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.ಕಳೆದ 7 ವರ್ಷಗಳಿಂದ ವೃಕ್ಷಭಾರತಿ ಸೇವಾ ಸಮಿತಿ ಸದಸ್ಯರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನು ದೊಡ್ಡ ಮರವಾಗಿ ಬೆಳೆಸಿದ್ದಾರೆ. ಅದೇ ರೀತಿ ಪ್ರತಿ ವರ್ಷ ತುಳಸಿ ವಿವಾಹ ಪೂರ್ವ ತುಳಸಿ ಸಸಿಗಳನ್ನು ವಿತರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಪ್ರತಿಯೊಬ್ಬರೂ ಮನೆಯಲ್ಲಿ ಹತ್ತಾರು ತುಳಸಿ ಸಸಿಗಳನ್ನು ಬೆಳೆಸಬೇಕು. ತುಳಸಿ ಗಿಡ ಪರಿಶುದ್ಧ ಆಮ್ಲಜನಕ ನೀಡುತ್ತದೆ. ಇದರಿಂದ ನಮ್ಮ ಮನೆಗೆ ಬೇಕಾದ ಶುದ್ಧ ಗಾಳಿಯನ್ನು ನಾವು ಪಡೆಯಬಹುದು ಹಾಗೂ ತುಳಸಿ ಸಸ್ಯ ಆರೋಗ್ಯಕ್ಕೆ ಹತ್ತಾರು ರೀತಿಯಲ್ಲಿ ಸಹಾಯಕವಾಗಿದೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವಿಚಾರ, ಆಚಾರ, ಸಂಸ್ಕಾರಗಳನ್ನು ಅಳವಡಿಸಿಕೊಂಡು ಪರಿಸರ ಸೇವೆ ಮಾಡಬೇಕು ಎಂದರು.ನಾರಾಯಣ ಕ್ಷೀರಸಾಗರ ಅಧ್ಯಕ್ಷತೆ ವಹಿಸಿದ್ದರು. ಸೋಮಣ್ಣ ನೆಗಳೂರ, ಶರಣಪ್ಪ ಆಲೂರ, ಮಂಜಣ್ಣ ಪಾಸ್ತೆ, ತಮ್ಮಣ್ಣ ಮಾಗುಂಡ, ಗೋಪಾಲ ಹೆಗಡೆ, ಗೋಪಾಲ ಮಳೇಕರ, ಮಹೇಶ ನಾಗರಾಳ, ಡಾ. ಅಯ್ಯನಗೌಡ್ರ, ಈರಣ್ಣ ಭಾವಿಕಟ್ಟಿ, ಯಶವಂತ ಮತ್ತೂರ ಇದ್ದರು. ಮಂಜುನಾಥ ಬ್ಯಾಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.