ಕೊಪ್ಪಳ: ಸುಳ್ಳು ದೂರು ನೀಡುವ ಜನರ ಮೇಲೂ ಮುಲಾಜಿಲ್ಲದೆ ಕೇಸ್ ದಾಖಲು ಮಾಡಿ ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ೩ನೇ ದಿನ ಶುಕ್ರವಾರ ಜರುಗಿದ ಲೋಕಾಯುಕ್ತ ಕೇಸ್‌ಗಳ ವಿಲೇವಾರಿ ಸಭೆಯಲ್ಲಿ ಸುಳ್ಳು ದೂರುಗಳ ಬಗ್ಗೆ ಮಾತನಾಡಿದ ಅವರು, ಸುಳ್ಳು ದೂರು ನೀಡಿದರೆ ಅವರ ವಿರುದ್ಧ ಕೇಸ್ ದಾಖಲಿಸಬೇಕು. ಅಲ್ಲದೆ ತಪ್ಪು ಮಾಡಿ ಜನರ ದಾರಿ ತಪ್ಪಿಸಿದ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಸುಳ್ಳು ದೂರು ಕೊಟ್ಟ ಜನತೆ ಬಿಸಿ ಮುಟ್ಟಿಸಿ ಕೇಸ್ ಹಾಕುವೆ ಎನ್ನುವ ಎಚ್ಚರಿಕೆ ನೀಡಿದರು.ಲೋಕಾಯುಕ್ತ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗದ ಕೆಲವು ಪಿಡಿಓಗಳ ವಿರುದ್ಧ ಸಿಡಿಮಿಡಿಗೊಂಡ ಉಪ ಲೋಕಾಯುಕ್ತರು ಜಿಪಂ ಸಿಇಒ ವರ್ಣಿತ ನೇಗಿ ಅವರಿಗೆ ಸೂಚನೆ ನೀಡಿ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರಲ್ಲದೇ ಕೆಆರ್‌ಐಡಿಎಲ್‌ನ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದ ರಾಜಶೇಖರ ದ್ಯಾಂಪುರ ಎನ್ನುವ ವ್ಯಕ್ತಿಯ ಹೆಸರನ್ನು ಹಲವು ಬಾರಿ ಕರೆದರೂ ಆತ ಗೈರು ಹಾಜರಿದ್ದನು. ಹೀಗಾಗಿ ಈ ಪ್ರಕರಣ ಕೈ ಬಿಟ್ಟು ಬೇರೆ ಪ್ರಕರಣ ವಿಚಾರಣೆ ನಡೆಸಿದರು.
ಬಸವರಾಜ ನರೇಗಲ್‌ಗೆ ಕ್ಲಾಸ್ !: ಇನ್ನು ಗಂಗಾವತಿ ಆಸ್ಪತ್ರೆಯ ವೈದ್ಯ ಈಶ್ವರ ಸವಡಿ ವಿರುದ್ಧ ದೂರು ಕೊಟ್ಟಿದ್ದ ಬಸವರಾಜ ನರೇಗಲ್ ಎನ್ನುವ ವ್ಯಕ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಓರ್ವ ಮಹಿಳೆಯ ಚಿಕಿತ್ಸೆಗೆ ವೈದ್ಯನು ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಸಿಡಿಮಿಡಿಗೊಂಡ ಉಪಲೋಕಾಯುಕ್ತರು ನೀನೇನು ಆ ಮಹಿಳೆ ಸಂಬಂಧಿಕನಾ? ಆ ಮಹಿಳೆ ನಿನ್ನ ಪತ್ನಿಯಾ? ನೀನು ಬಾಧಿತನಾ ? ನೀನೇಕೆ ವೈದ್ಯನ ವಿರುದ್ಧ ದೂರು ಕೊಟ್ಟೆ? ಆ ಮಹಿಳೆ ಏಕೆ ದೂರು ಕೊಟ್ಟಿಲ್ಲ ಎಂದು ಬಸವರಾಜ ನರೇಗಲ್‌ರನ್ನು ಪ್ರಶ್ನೆ ಮಾಡಿ ಈ ರೀತಿ ಸುಳ್ಳು ದೂರು ಕೊಟ್ಟರೆ ನಿನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸುವೆ ಎಂದು ಎಚ್ಚರಿಕೆ ನೀಡಿ ಪ್ರಕರಣ ಇತ್ಯರ್ಥಪಡಿಸಿದರಲ್ಲದೇ ಸುಳ್ಳು ಕೇಸ್ ಹಾಕುವ ಇಂಥವರ ಮೇಲೆ ಕೂಡಲೇ ಕೇಸ್ ಹಾಕಿ ಎಂದು ವೈದ್ಯ ಈಶ್ವರ ಸವಡಿ ಅವರಿಗೆ ನಿರ್ದೇಶನ ನೀಡಿದರು.ಕುಷ್ಟಗಿ ಎಇಇ ಸುರೇಶ್‌ಗೆ ತರಾಟೆ : ಕುಷ್ಟಗಿ ತಾಲೂಕಿನ ಬಿಜಕಲ್‌ನಲ್ಲಿ ೮೦ ಮನೆಗೆ ಜೆಜೆಎಂನಡಿ ನೀರು ಕೊಡುತ್ತಿಲ್ಲ. ಗ್ರಾಮೀಣ ನೀರು ಸರಬರಾಜು ಮೂಲಕವೂ ನೀರು ಕೊಡುತ್ತಿಲ್ಲ. ಜನರಿಗೆ ಕುಡಿಯಲು ನೀರು ಪೂರೈಸುವುದು ಮೂಲಭೂತ ಹಕ್ಕು.ಇದು ನಿನಗೆ ಗೊತ್ತಿಲ್ಲವೇ ಎಂದು ಉಪಲೋಕಾಯುಕ್ತರು ಎಇಇ ಸುರೇಶ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರಲ್ಲದೇ ನೀವು ಬಾಬಾ ತರ ಹೇರ ಸ್ಟೈಲ್ ಬಿಟ್ಟುಕೊಂಡಿದ್ದೀರಾ? ಮೊದಲು ಜನಕ್ಕೆ ಕುಡಿಯಲು ನೀರು ಕೊಡಬೇಕು ಎಂದರು, ಅಲ್ಲದೇ ಪೊಲೀಸ್ ಇಲಾಖೆ ಮೂಲಕ ೮೦ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆಯೋ ಇಲ್ಲವೋ ಎಂದು ತಪಾಸಣೆ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣಪತಿ ಪಾಟೀಲ್‌ಗೆ ತೀವ್ರ ತರಾಟೆ:ನಗರಸಭೆಯಲ್ಲಿನ ಪ್ರಕರಣವೊಂದರ ವಿಚಾರಣೆಯ ವೇಳೆ ಈ ಹಿಂದಿನ ಪೌರಾಯುಕ್ತರಾಗಿದ್ದ ಗಣಪತಿ ಪಾಟೀಲ್ ಅವರನ್ನು ಉಪಲೋಕಾಯುಕ್ತ ವೀರಪ್ಪ ತೀವ್ರ ತರಾಟೆ ತೆಗೆದುಕೊಂಡರು.
ನಗರದಲ್ಲಿ ಅತಿಕ್ರಮಣ ಪ್ರಕಣವೊಂದರಲ್ಲಿ ಹೈಕೋರ್ಟ್ ಆದೇಶವಿದೆ.ಆದರೆ ಗಣಪತಿ ಪಾಟೀಲ್ ಸಹಿ ಇಲ್ಲದ ಪ್ರತಿ ಮಾಹಿತಿ ಹಕ್ಕಿನಡಿ ಕೊಡಲಾಗಿದೆ. ಇದೆಲ್ಲವೂ ನಿಮ್ಮ ನಿರ್ಲಕ್ಷತೆಯಿಂದ ಹೀಗಾಗಿದೆ. ನಿಮ್ಮಂಥ ಅಧಿಕಾರಿಗಳಿಂದಲೇ ವ್ಯವಸ್ಥೆ ಹಾಳಾಗುತ್ತಿದೆ. ಸುಮ್ಮನೆ ಇಲ್ಲಿ ಉತ್ತರ ಕೊಡಲು ಬರಬೇಡಿ ಎಂದು ಆಕ್ರೋಶ ಹೊರ ಹಾಕಿದರು.ಏಕಪಾತ್ರಾಭಿನಯ ಮಾಡಬೇಡಿ ಎಂದು ಶಾಕ್: ಅಧಿಕಾರಿಗಳು ತಮ್ಮ ಲೋಕಾಯುಕ್ತ ಕೇಸ್‌ಗಳ ದಾಖಲೆ ತಂದು ಉಪ ಲೋಕಾಯುಕ್ತರ ಮುಂದೆ ಇರಿಸಿ ಪ್ರಕರಣ ವಿವರಣೆ ಕೊಡುವ ವೇಳೆ ಈ ಪ್ರಕರಣದಲ್ಲಿ ನೀವು ಬರಿ ಏಕಪಾತ್ರಾಭಿನಯ ಮಾಡಬೇಡಿ. ಜನರ ಸಮಸ್ಯೆ ಮೊದಲು ಆಲಿಸುವುದನ್ನು ಕಲಿಯಿರಿ, ಮೊದಲೇ ಸರಿಯಾಗಿ ಆಲಿಸಿ ಇತ್ಯರ್ಥ ಮಾಡಿದ್ದರೆ ಇಲ್ಲಿ ಬಂದು ಉತ್ತರ ಕೊಡುವ ಅಗತ್ಯವಿರುತ್ತಿರಲಿಲ್ಲ ಎಂದು ಉಪಲೋಕಾಯುಕ್ತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ 3 ದಿನಗಳ ಕಾಲ ಕರ್ನಾಟಕ ಲೋಕಾಯುಕ್ತರಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಜಿಲ್ಲೆಯ 43 ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಸೂಕ್ತ ದಾಖಲಾತಿ ಇಲ್ಲದ, ಚಾಲನೆಗೆ ಯೋಗ್ಯವಲ್ಲದ 98 ಶಾಲಾ ಬಸ್ ಜಪ್ತಿ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ₹1,63,000/- ದಂಡ ವಸೂಲಿ ಮಾಡಲಾಗಿದೆ. ಇದೆಲ್ಲವೂ ನಾನು ಬಂದು ಮಾಡುವಂತದ್ದಲ್ಲ. ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೆ ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ ಎಂದರು.ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಲೋಕಾಯುಕ್ತ ವಿಚಾರಣೆ ಅಪರ ನಿಬಂಧಕ ಡಾ.ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಹಾಂತೇಶ್ ಎಸ್. ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಎಸ್. ಚಿಟಗುಬ್ಬಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಇತರರಿದ್ದರು.