ಹುಬ್ಬಳ್ಳಿಯಿಂದ ಹೊಸಪೇಟೆ-ಗುಂತಕಲ್‌ಗೆ ಮೆಮು ರೈಲು ಆರಂಭ

KannadaprabhaNewsNetwork |  
Published : Nov 01, 2025, 02:30 AM IST
31ಎಚ್‌ ಪಿಟಿ2- ಮೆಮು ರೈಲು. | Kannada Prabha

ಸಾರಾಂಶ

ಈ ರೈಲು ಇತರ ಸಾಂಪ್ರದಾಯಿಕ ಹಾಗೂ ಡೆಮು ರೈಲುಗಳಿಗಿಂತ ಭಿನ್ನವಾಗಿದೆ.

ಹೊಸಪೇಟೆ: ರಾಜ್ಯದಲ್ಲಿ ಬೆಂಗಳೂರು- ಮೈಸೂರು- ತುಮಕೂರು ಭಾಗದಲ್ಲಿ ಮಾತ್ರ ಸಂಚರಿಸುತ್ತಿರುವ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ಪ್ರಯಾಣಿಕರ ರೈಲಿಗೆ ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಚಾಲನೆ ನೀಡಲಾಗಿದೆ.

ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ಹುಬ್ಬಳ್ಳಿ- ಹೊಸಪೇಟೆ- ಗುಂತಕಲ್ ನಡುವೆ (ಗಾಡಿ ಸಂಖ್ಯೆ : 56911/56912) ಅ.31ರಿಂದ ಸಂಚಾರ ಆರಂಭಿಸಿದೆ.

ಈ ರೈಲು ಇತರ ಸಾಂಪ್ರದಾಯಿಕ ಹಾಗೂ ಡೆಮು ರೈಲುಗಳಿಗಿಂತ ಭಿನ್ನವಾಗಿದೆ. ಡೆಮು ರೈಲು ಡೀಸೆಲ್ ಮತ್ತು ವಿದ್ಯುತ್‌ನಿಂದ ಸಂಚರಿಸಿದರೆ ಮೆಮು ರೈಲು ಸಂಪೂರ್ಣವಾಗಿ ವಿದ್ಯುತ್ ಅವಲಂಬಿತವಾಗಿದೆ. ಈ ರೈಲು ಹೊಗೆ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ರೈಲಿನ ಎರಡು ಬದಿ ಹಾಗೂ ಮಧ್ಯಭಾಗದಲ್ಲಿ ಎಂಜಿನ್ ಇರುವುದರಿಂದ ಸಾಮಾನ್ಯವಾಗಿ ಯಾವುದೇ ಸಂದರ್ಭದಲ್ಲಿ ರೈಲು ದುರಸ್ತಿಗಾಗಿ ನಿಲ್ಲುವುದಿಲ್ಲ. ಗಮ್ಯ ನಿಲ್ದಾಣದಲ್ಲಿ ಎಂಜಿನ್ ತಿರುಗಿಸುವಿಕೆ ಇಲ್ಲದಿರುವುದರಿಂದ ಸಮಯ ವ್ಯರ್ಥವಾಗದೆ ಕೂಡಲೇ ಅಲ್ಲಿಂದ ನಿರ್ಗಮಿಸಿ, ಸಕಾಲದಲ್ಲಿ ರೈಲಿನ ಸಮಯಪಾಲನೆಗೆ ಅನುಕೂಲವಾಗಿದೆ. ರೈಲಿನ ಕೋಚ್‌ಗಳು ಸುಸಜ್ಜಿತವಾಗಿದ್ದು ಪ್ರಯಾಣಿಕರಿಗೆ ಅಗತ್ಯವಾದ ಮೂಲ ಸೌಲಭ್ಯಗಳಿರುತ್ತವೆ. ರೈಲಿನಲ್ಲಿ ಜಿಪಿಎಸ್ ಸೌಲಭ್ಯ ಅಳವಡಿಸಿರುವುದರಿಂದ ಪ್ರತಿ ಮುಂದಿನ ನಿಲ್ದಾಣದ ನಿಲುಗಡೆಯನ್ನು ಮೊದಲೇ ಈ ರೈಲಿನಲ್ಲಿ ಪ್ರಕಟಿಸಲಾಗುವುದು. ಇತರ ರೈಲುಗಳಿಗಿಂತ ನಿರ್ವಹಣಾ ವೆಚ್ಚವು ಕಡಿಮೆ ಮತ್ತು ಮಿತವ್ಯಯ.

ಈ ಮುಂಚೆ ಸಂಚರಿಸುತ್ತಿದ್ದ ಹುಬ್ಬಳ್ಳಿ-ಗುಂತಕಲ್ ಸಾಂಪ್ರದಾಯಿಕ ಐ.ಸಿ.ಎಫ್. ರೈಲನ್ನು ಬದಲಾಯಿಸಿ ಅದೇ ವೇಳಾಪಟ್ಟಿಯಲ್ಲಿ ಮೆಮು ಆರಂಭಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 7.45ಕ್ಕೆ ನಿರ್ಗಮಿಸಿ ಹೊಸಪೇಟೆಗೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿ, ಇಲ್ಲಿಂದ ನಿರ್ಗಮಿಸಿ ಗುಂತಕಲ್‌ಗೆ ಮಧ್ಯಾಹ್ನ 2.30ಕ್ಕೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 3.30ಕ್ಕೆ ನಿರ್ಗಮಿಸಿ ಹೊಸಪೇಟೆಗೆ ಸಂಜೆ 6.30ಕ್ಕೆ ಆಗಮಿಸಿ, ಹುಬ್ಬಳ್ಳಿಯನ್ನು ರಾತ್ರಿ 10.30ಕ್ಕೆ ತಲುಪುತ್ತದೆ. ಪ್ರಯಾಣ ದರ ಹೊಸಪೇಟೆಯಿಂದ ಹುಬ್ಬಳ್ಳಿಗೆ ₹35 ಇದ್ದು, ಬಳ್ಳಾರಿಗೆ ₹20 ಹಾಗೂ ಗುಂತಕಲ್‌ಗೆ ₹30 ನಿಗದಿಪಡಿಸಿದೆ.

ಮಂತ್ರಾಲಯವರೆಗೂ ವಿಸ್ತರಿಸಿ:

ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ ಮಾರ್ಗದಲ್ಲಿ ಮೆಮು ರೈಲು ಆರಂಭಿಸುವಂತೆ ಕಳೆದ ಒಂದು ವರ್ಷದಿಂದ ವಿಜಯನಗರ ರೈಲ್ವೆ ಬಳಕೆದಾರರ ಸಂಘವು ನೈರುತ್ಯ ರೈಲ್ವೆ ಪ್ರದಾನ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಇಲಾಖೆಯ ಅಧಿಕಾರಿಗಳಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘವು ಕೃತಜ್ಞತೆ ಸಲ್ಲಿಸಿದ್ದು, ಉತ್ತರ ಕರ್ನಾಟಕದಿಂದ ರಾಯರ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಈ ರೈಲನ್ನು ಮಂತ್ರಾಲಯದ (ರಾಯಚೂರು) ವರೆಗೆ ವಿಸ್ತರಿಸುವಂತೆ ಆಗ್ರಹಪಡಿಸಲಾಗಿದೆ ಎಂದು ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!