ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿ-ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Nov 01, 2025, 02:30 AM IST
ಫೋಟೊ: 31ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಪಂಚ ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿಯನ್ನು ನಮ್ಮ ಸರ್ಕಾರ ಕೊಟ್ಟಿದೆ. ವಾಸಿಸುವವರನ್ನು ಮನೆಯ ಒಡೆಯರನ್ನಾಗಿ ಮಾಡಿ, 10 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಭೂಮಿಗೆ ಮಾಲಿಕನನ್ನಾಗಿ ಮಾಡಿದೆ. ಶಾಸಕ ಶ್ರೀನಿವಾಸ ಮಾನೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಪರಿಣಾಮ ಜಿಲ್ಲೆಯಲ್ಲಿಯೇ ಹಾನಗಲ್ ತಾಲೂಕಿನಲ್ಲಿ ಅತೀ ಹೆಚ್ಚು ಫಲಾನುಭವಿಗಳು ಹಕ್ಕುಪತ್ರ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾನಗಲ್ಲ: ಪಂಚ ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿಯನ್ನು ನಮ್ಮ ಸರ್ಕಾರ ಕೊಟ್ಟಿದೆ. ವಾಸಿಸುವವರನ್ನು ಮನೆಯ ಒಡೆಯರನ್ನಾಗಿ ಮಾಡಿ, 10 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಭೂಮಿಗೆ ಮಾಲಿಕನನ್ನಾಗಿ ಮಾಡಿದೆ. ಶಾಸಕ ಶ್ರೀನಿವಾಸ ಮಾನೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಪರಿಣಾಮ ಜಿಲ್ಲೆಯಲ್ಲಿಯೇ ಹಾನಗಲ್ ತಾಲೂಕಿನಲ್ಲಿ ಅತೀ ಹೆಚ್ಚು ಫಲಾನುಭವಿಗಳು ಹಕ್ಕುಪತ್ರ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಶುಕ್ರವಾರ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಆಲದಕಟ್ಟಿ ಮತ್ತು ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವೇಯರ್‌ಗಳ ಕೊರತೆ ಇದ್ದರೂ ಸಹ ಸ್ವಂತ ಹಣ ನೀಡಿ ಖಾಸಗಿ ಸರ್ವೇಯರ್‌ಗಳಿಂದ ಕೆಲಸ ಮಾಡಿಸಿ ಬಡವರಿಗೆ ಹಕ್ಕುಪತ್ರ ಕೊಡಿಸುವ ಕೆಲಸವನ್ನು ಹಾನಗಲ್‌ನಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾಡುತ್ತಿದ್ದಾರೆ. ನಾನೂ ಸಹ ಒಂದು ಕ್ಷೇತ್ರದ ಶಾಸಕನಾಗಿ ಮಾಡದ ಕೆಲಸವನ್ನು ಹಾನಗಲ್‌ನಲ್ಲಿ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಇರಬೇಕು, ಹಸಿದ ಹೊಟ್ಟೆಗೆ ಅನ್ನ ಸಿಗಬೇಕು ಎಂದು, ಜನಕಲ್ಯಾಣವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಕಳಕಳಿಯಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು ಹಾವೇರಿ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಕಟ್ಟಡ ಭಾಗ್ಯ ಒದಗಿಸಲಾಗಿದೆ. ಪ್ರತಿವರ್ಷ ನೂರು ಜನ ವೈದ್ಯರನ್ನು ಹಾವೇರಿ ಜಿಲ್ಲೆ ನೀಡುತ್ತಿದೆ. ಜಿಲ್ಲೆಯ 400 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗಳು ಅಂತಿಮ ಹಂತಕ್ಕೆ ಬಂದಿವೆ, ಬೆಳೆಹಾನಿಗೆ ಪರಿಹಾರ ಕೊಡುವ ಕೆಲಸ ಶೀಘ್ರ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಬರುವ ಹಣಕ್ಕಿಂತ ಹೆಚ್ಚು ಹಣ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು. ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ತಾಲೂಕಿನ ಜನತೆಗೆ ಹಕ್ಕುಪತ್ರ ದೊರಕಿಸುವ 6ನೇ ಗ್ಯಾರಂಟಿಯ ಭರವಸೆ ಸಹ ನೀಡಲಾಗಿತ್ತು. 30-40 ವರ್ಷಗಳ ಕಾಲ ಮನೆ ಮಾಲಿಕತ್ವ ಇಲ್ಲದೇ ಪರಿತಪಿಸುತ್ತಿದ್ದ ಸಾವಿರಾರು ಕುಟುಂಬಗಳಲ್ಲೀಗ ಸಂತಸ ಮೂಡಿಸಿದ ಸಾರ್ಥಕತೆ ನನ್ನದಾಗಿದೆ. ಶಿಕ್ಷಣ, ವಿದ್ಯುತ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಅನುಷ್ಠಾನಗೊಳಿಸಲಾಗಿದೆ. ನರೇಗಲ್, ಕೂಸನೂರು ಭಾಗದ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷೆಯ 220 ಕೋಟಿ ರು. ವೆಚ್ಚದ ಯೋಜನೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದ ಅವರು ಬಡವರ ಭಾವನೆ ಅರಿಯದವರು ಜನರ ದಾರಿ ತಪ್ಪಿಸುತ್ತಿದ್ದಾರೆ. 10 ಕೆಜಿ ಅಕ್ಕಿ ಏಕೆ? ಎಂದು ಪ್ರಶ್ನಿಸುತ್ತಿರುವ ಕೆಲವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸುವವರೊಮ್ಮೆ ಕಣ್ಣಿನ ಪೊರೆಗೆ ಚಿಕಿತ್ಸೆ ಮಾಡಿಸಿಕೊಳ್ಳಲಿ. ಭ್ರಷ್ಟಾಚಾರ ಎನ್ನುವುದು ದೊಡ್ಡ ಕಾಯಿಲೆ. ದುಡ್ಡು ಕೊಡುವವರು ಇರುವವರೆಗೂ ಇದಕ್ಕೆ ಕೊನೆ ಇಲ್ಲ. ರಾಜಕಾರಣ, ಟೀಕೆ, ಟಿಪ್ಪಣಿಗಳು ಚುನಾವಣೆಗೆ ಸೀಮಿತವಾಗಿರಬೇಕು. ಜನ ಆಶೀರ್ವದಿಸಿ ನನಗೆ ಅವಕಾಶ ಕೊಟ್ಟಿದ್ದು ಪ್ರಾಮಾಣಿಕವಾಗಿ ತಾಲೂಕಿನ ಅಭಿವೃದ್ಧಿ, ಜನಕಲ್ಯಾಣದಲ್ಲಿ ತೊಡಗಿದ್ದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸರ್ಕಾರ ಡಿಜಿಟಲ್ ಹಕ್ಕು ಪತ್ರ ನೀಡುವ ಯೋಜನೆ ಮೂಲಕ ದಾಖಲೆಗಳನ್ನು ಶಾಶ್ವತವಾಗಿ ಉಳಿಸುವ ಯೋಜನೆ ನೀಡಿದೆ. ಡಿಸೆಂಬರ್ ಒಳಗಾಗಿ ಹಾವೇರಿ ಜಿಲ್ಲೆಯಲ್ಲಿ ಶೇ.100 ಹಕ್ಕು ಪತ್ರ ನೀಡುವ ಕಾರ್ಯ ನಡೆಯಲಿದೆ. ಮುಂದುವರಿದು ಮಾತನಾಡಿದ ಅವರು ತಂಬಾಕು ಸೇವನೆಯಿಂದ ಲಕ್ಷಾಂತರ ಜನ ಸಾಯುತ್ತಿದ್ದಾರೆ. ನಾವು ತಂಬಾಕು ಮುಕ್ತ ಅಭಿಯಾನ ಆರಂಭಿಸುತ್ತಿದ್ದು, ಇಷ್ಟರಲ್ಲೇ ಜಿಲ್ಲೆಯ 30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡುವ ಯೋಜನೆ ನಮ್ಮದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಶೀಲ್ದಾರ್ ರೇಣುಕಾ ಎಸ್., ಆಲದಕಟ್ಟಿ ಗ್ರಾಪಂ ಅಧ್ಯಕ್ಷೆ ಮಾಳವ್ವ ದೇವಸೂರ, ಮಾರನಬೀಡ ಗ್ರಾಪಂ ಅಧ್ಯಕ್ಷ ಈರಣ್ಣ ಜಾಡರ, ಉಪಾಧ್ಯಕ್ಷೆ ನಗೀನಾ ಹರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಜಿಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಕೊಟ್ರಪ್ಪ ಕುದರಿಸಿದ್ದನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮಲ್ಲಿಕಾರ್ಜುನ ದೇವಣ್ಣನವರ, ಸುರೇಶ ಮುಸುರಿ, ಬಸನಗೌಡ ಪಾಟೀಲ, ಚಂದ್ರು ಬಳ್ಳಾರಿ, ಉಳವಪ್ಪ ಜಿಂಗಿ, ಅಶೋಕ ಹೆಗಡೆ, ಗೋಪಾಲ ಕಾಟಣ್ಣನವರ, ವೆಂಕಟೇಶ ಬಂಡಿವಡ್ಡರ, ಮಹಲಿಂಗಪ್ಪ ಹಾದಿಮನಿ ಇದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!