ಗದಗ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಅದರಿಂದ ಕುಟುಂಬ, ಸಮಾಜ, ಆರ್ಥಿಕ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಆ ನಿಟ್ಟಿನಲ್ಲಿ ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರುತಿಸಿ, ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ಹೇಳಿದರು.
ನಗರದ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾರ್ಶ್ವವಾಯು ಬಾಧಿತ ರೋಗಿಗಳು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕು. ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡ ಕೊಠಡಿ ಸಂಖ್ಯೆ: 105ರಲ್ಲಿ ಪ್ರತಿನಿತ್ಯ ಮೆದುಳು ಆರೋಗ್ಯ ಕ್ಲಿನಿಕ್‌ಗೆ ಭೇಟಿ ನೀಡಿ ಚಿಕಿತ್ಸೆ, ಮನೋಸಾಮಾಜಿಕ ಬೆಂಬಲ, ಫಿಜಿಯೋಥೆರಪಿ ಹಾಗೂ ಸ್ಪೀಚ್ ಥೆರಪಿ ಸೌಲಭ್ಯ ಪಡೆದು ಪಾರ್ಶ್ವವಾಯುವಿನಿಂದ ಗುಣಮುಖರಾಗಬೇಕು ಎಂದರು.ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಮಾತನಾಡಿ, ರೋಗಿಗಳಿಗೆ ಒಂದು ನಿಮಿಷ ಸಹ ಬಂಗಾರದಂತಹ ಸಮಯವಾಗಿದ್ದು, ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತಿ ಅವಶ್ಯಕ ಎಂದು ಹೇಳಿದರು.
ಶ್ವಾಸಕೋಶ ತಜ್ಞ ಡಾ. ಇರ್ಫಾನ್ ಎಂ. ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಿ ಎಂದರು.ಡಾ. ಅರ್ಪಿತಾ ಮಾತನಾಡಿದರು. ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ರೇಷ್ಮಾ ನದಾಫ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು. ಪ್ರವೀಣ ಎಸ್. ಕಾರ್ಯಕ್ರಮ ನಿರೂಪಿಸಿದರು. ರವಿ ನಂದ್ಯಾಳ ಸ್ವಾಗತಿಸಿದರು. ರೇವಣಸಿದ್ದಪ್ಪ ವಂದಿಸಿದರು.