ತುರುವೇಕೇರೆ ಪಪಂಯಲ್ಲಿ ಅರಳಿದ ಕಮಲ

KannadaprabhaNewsNetwork | Published : Sep 11, 2024 1:12 AM

ಸಾರಾಂಶ

ತುರುವೇಕೇರೆ ಪಪಂಯಲ್ಲಿ ಅರಳಿದ ಕಮಲ

ಕನ್ನಡಪ್ರಭವಾರ್ತೆ ತುರುವೇಕೆರೆ

ಇಲ್ಲಿಯ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸದಸ್ಯೆ ಆಶಾರಾಣಿ ರಾಜಶೇಖರ್ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಮಹೇಶ್ ರವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪಟ್ಟಣ ಪಂಚಾಯ್ತಿ ಬಿಜೆಪಿಯ ವಶವಾಗಿದೆ.ವಿಶೇಷ ಎಂದರೆ ಬಿಜೆಪಿ ಅಧ್ಯಕ್ಷರಿಗೆ ಕಾಂಗ್ರೆಸ್ ಸದಸ್ಯರು ಸೂಚಕರಾಗಿ ಬೆಂಬಲ ನೀಡಿದ್ದು. ಮಂಗಳವಾರ ನಡೆದ ತುರುವೇಕೆರೆಯ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ೧೪ ಸದಸ್ಯರ ಪೈಕಿ ಓರ್ವ ಪಕ್ಷೇತರ ಸದಸ್ಯರ ಬಲದೊಂದಿಗೆ ಬಿಜೆಪಿ ೭ ಸಂಖ್ಯಾಬಲವನ್ನು ಹೊಂದಿವ ಮೂಲಕ ಸ್ಪಷ್ಟ ಬಹುಮತ ಪಡೆಯಿತು. ರಾಜ್ಯದಲ್ಲಿ ಮಿತ್ರ ಪಕ್ಷವಾಗಿರುವ ಜೆಡಿಎಸ್‌ 5 ಸದಸ್ಯರನ್ನು ಹೊಂದಿದ್ದರೂ ಇಲ್ಲಿ ಮಾತ್ರವೇ ಯಾವುದೇ ಬೆಂಬಲ ನೀಡದೆ ತಟಸ್ಥವಾಗಿದ್ದು ತಳಮಟ್ಟದಲ್ಲಿ ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಇನ್ನೂ ಮೈತ್ರಿ ಬೆಸುಗೆ ಆಗದೆ ಇರುವುದು ಸ್ಪಷ್ಟವಾಗಿದೆ.

ಈ ಚುನಾವಣೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್‌ ಜಿಲ್ಲಾಮಟ್ಟದ ನಾಯಕರ ಮಧ್ಯೆ ಮಾತುಕತೆ ನಡೆದಿತ್ತಾದರೂ ಮಾಜಿ ಶಾಸಕ ಮಸಾಲೆ ಜಯರಾಂ ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪದ ಕಾರಣ ಹಾಲಿ ಶಾಸಕ ಕೃಷ್ಣಪ್ಪ ಅವರಿಗೆ ಕಷ್ಟವಾಗಿತ್ತು. ಈ ಸಲುವಾಗಿ ಕೇಂದ್ರ ರಾಜ್ಯ ಸಚಿವರ ಸಮ್ಮುಖ ಹಾಗೂ ಜಿಲ್ಲಾ ಬಿಜೆಪಿ, ಜೆಡಿಎಸ್ ಮುಖಂಡರೊಂದಿಗೆ ಮಾತುಕತೆಯೂ ನಡೆಯಿತು. ಈಗಾಗಲೇ ಬಿಜೆಪಿ ಅಧಿಕಾರ ನಡೆಸಿರುವುದರಿಂದ ಈ ಬಾರಿ ಜೆಡಿಎಸ್ ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಆದರೆ ಮಾಜಿ ಶಾಸಕರಾದ ಮಸಾಲಾ ಜಯರಾಮ್ ರವರು ತಮ್ಮ ಪಕ್ಷ ಬಿಜೆಪಿಗೆ ಸ್ಪಷ್ಟವಾದ ಬೆಂಬಲ ಇದೆ. ಅಲ್ಲದೇ ಜೆಡಿಎಸ್ ನ ಓರ್ವ ಸದಸ್ಯರು ಹಾಗೂ ಕಾಂಗ್ರೆಸ್ ನ ಇಬ್ಬರು ಸದಸ್ಯರೂ ತಮ್ಮ ಪಕ್ಷದ ಅಭ್ಯರ್ಥಿಗಳ ಬೆಂಬಲಕ್ಕೆ ಇದ್ದಾರೆ. ಹಾಗಾಗಿ ಇಲ್ಲಿ ಜೆಡಿಎಸ್ ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಮಾತನಾಡಿ ತಮ್ಮ ಪಕ್ಷಕ್ಕೇ ಎರಡೂ ಸ್ಥಾನಗಳು ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೆಯ ಅವಧಿಯಲ್ಲೂ ಬಿಜೆಪಿ ಎರಡುವರೆ ವರ್ಷ ಬಿಜೆಪಿ ಅಧಿಕಾರ ನಡೆಸಿತ್ತು. ಈ ಎರಡನೇ ಅವಧಿಯಲ್ಲೂ ಬಿಜೆಪಿ ಅಧಿಕಾರ ಹಿಡಿದಿದೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಈ ಹಿಂದೆಯೂ ಅಧ್ಯಕ್ಷರಾಗಿದ್ದ ಆಶಾರಾಣಿ ರಾಜಶೇಖರ್ ರವರೇ ಪುನಃ ಎರಡನೇ ಬಾರಿ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗ ಉಪಾಧ್ಯಕ್ಷರಾಗಿರುವ ಭಾಗ್ಯಮ್ಮ ನವರು ಈ ಹಿಂದೆಯೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರ ನಾಮಪತ್ರಕ್ಕೆ ಕಾಂಗ್ರೆಸ್ ನ ಸದಸ್ಯ ಯಜಮಾನ್ ಮಹೇಶ್ ಸೂಚಕರಾಗಿ ಅಂಕಿತ ಹಾಕಿದ್ದು ಈ ಬಾರಿಯ ವಿಶೇಷವಾಗಿತ್ತು.

೪ ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ೧೨ ಸದಸ್ಯರು ಮಾತ್ರ ಹಾಜರಾಗಿದ್ದರು. ಇಬ್ಬರು ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಎನ್.ಎ.ಕುಂ.ಇ ಅಹಮದ್ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಟ್ಟಣ ಪಂಚಾಯತಿ ಸದಸ್ಯರಾದ ಯಜಮಾನ್ ಮಹೇಶ್, ಎನ್.ಆರ್.ಸುರೇಶ್, ಅಂಜನ್ ಕುಮಾರ್, ಮಧು, ರವಿ, ಚಿದಾನಂದ್, ಪ್ರಭಾಕರ್, ಸ್ವಪ್ನ ನಟೇಶ್, ಜಯಮ್ಮ, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಮುತ್ತಣ್ಣ, ಮಾಜಿ ಅಧ್ಯಕ್ಷ ದುಂಡಾರೇಣಕಪ್ಪ, ಬಿಜೆಪಿ ಮುಖಂಡರಾದ ಸೋಮಶೇಖರ್, ಪ್ರಸಾದ್, ಸಿದ್ದಣ್ಣ, ಪ್ರಕಾಶ್, ಸುರೇಶ್ ಸೇರಿದಂತೆ ಹಲವಾರು ಮುಖಂಡರು ಅಭಿನಂದಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗು ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಬಾವುಟ ಹಿಡಿದು ಸಂಭ್ರಮಿಸಿದರು. ಮಾಜಿ ಶಾಸಕ ಮಸಾಲಜಯರಾಮ್ ಹಾಗೂ ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕಿದರು.

Share this article