ಕಾಂಗ್ರೆಸ್‌ ತೆಕ್ಕೆಗೆ ಜಾರಿದ ಮದ್ದೂರು ಪುರಸಭೆ ಆಡಳಿತ ಮಂಡಳಿ

KannadaprabhaNewsNetwork |  
Published : Sep 10, 2024, 01:40 AM IST
ಮದ್ದೂರು ಪುರಸಭೆ ಆಡಳಿತ ಮಂಡಳಿ | Kannada Prabha

ಸಾರಾಂಶ

ಮದ್ದೂರು ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೋಕಿಲ ಅರುಣ್, ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ತಲಾ 15 ಮತ ಪಡೆದು ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಬಹುಮತ ಹೊಂದಿದ್ದ ಜೆಡಿಎಸ್‌ಗೆ ಮುಖಭಂಗವಾಗಿದೆ.

ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೋಕಿಲ ಅರುಣ್, ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ತಲಾ 15 ಮತ ಪಡೆದು ಆಯ್ಕೆಯಾದರು.

23 ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್ 12, ಕಾಂಗ್ರೆಸ್ 4, ಬಿಜೆಪಿ 1 ಹಾಗೂ 6 ಮಂದಿ ಪಕ್ಷೇತರರು ಹಾಗೂ ಓರ್ವ ಎಂಪಿ, ಎಂಎಲ್ಎ ಸೇರಿ ಒಟ್ಟು 25 ಜನರಿಗೆ ಮತದಾನದ ಹಕ್ಕು ಹೊಂದಿದ್ದರು. ಜೆಡಿಎಸ್‌ನ 12 ಮಂದಿ ಸದಸ್ಯರ ಪೈಕಿ 6 ಮಂದಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಜೆಡಿಎಸ್‌-ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ.

ಮೊದಲ ಅವಧಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎರಡನೇ ಅವಧಿಯಲ್ಲಿ ಕೇವಲ 4 ಸ್ಥಾನ ಹೊಂದಿದ್ದ ಕಾಂಗ್ರೆಸ್ ಶಾಸಕ ಕೆ.ಎಂ.ಉದಯ್ ಅವರ ಚಾಣಕ್ಷ ನಡೆಯಿಂದ ಪುರಸಭೆಯಲ್ಲಿ ಒಟ್ಟು 15 ಮತ ಪಡೆದ ಕೋಕಿಲಾ ಅರುಣ್ ಹಾಗೂ ಪ್ರಸನ್ನಕುಮಾರ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಹಿಂದಿನ ಅಧಿಕಾರಾವಧಿಯಲ್ಲಿ ಅಧ್ಯಕ್ಷರಾಗಿದ್ದ ಸುರೇಶ್ ಕುಮಾರ್ ಮತದಾನ ಪ್ರಕ್ರಿಯೆಯಿಂದ ಗೈರಾಗಿದ್ದರು.

ಚುನಾವಣಾಧಿಕಾರಿಯಾಗಿ ಪ್ರಭಾರ ತಹಸೀಲ್ದಾರ್ ಸೋಮಶೇಖರ್ ಕಾರ್ಯ ನಿರ್ವಹಿಸಿದರು. ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಒಲಿಯುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿ ಜೈಕಾರ ಕೂಗುತ್ತಾ ಸಂಭ್ರಮಾಚರಣೆ ಮಾಡಿದರು.

ಯಶಸ್ವಿಯಾದ ಆಪರೇಷನ್ ಹಸ್ತ

ಮದ್ದೂರು:

ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು, ಜೆಡಿಎಸ್‌ಗೆ ಮುಖಭಂಗ ಮಾಡಲು ಶಾಸಕ ಕೆ.ಎಂ.ಉದಯ್ ರೂಪಿಸಿದ ರಣತಂತ್ರ ಯಶಸ್ವಿಯಾಗಿದೆ.

ಆಪರೇಷನ್ ಹಸ್ತದ ಮೂಲಕ ಶಾಸಕ ಉದಯ್ ತಂತ್ರ ರೂಪಿಸಿದ ಪರಿಣಾಮ 15 ಮತ ಪಡೆದು ಅಧ್ಯಕ್ಷರಾಗಿ ಕೋಕಿಲ ಅರುಣ್, ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ಆಯ್ಕೆಯಾಗಿದ್ದಾರೆ. ಕೊನೆಗೂ ಆಪರೇಷನ್ ಹಸ್ತದ ಮೂಲಕ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಸೆಡ್ಡು ಹೊಡೆದಿದೆ.

12 ಜನ ಜೆಡಿಎಸ್ ಸದಸ್ಯರ ಪೈಕಿ 6 ಮಂದಿ ಜೆಡಿಎಸ್‌ಗೆ ಕೈಕೊಟ್ಟಿದ್ದಾರೆ. ಬಹುಮತ ಇದ್ದರು ಅಧಿಕಾರ ಹಿಡಿಯಲಾಗದೆ ಜೆಡಿಎಸ್ ಮುಖಭಂಗ ಅನುಭವಿಸಿದೆ. ಪಟ್ಟಣ ಪುರಸಭೆಯಲ್ಲಿ ಅಧಿಕಾರ ಹಿಡಿಯುವ ಮೂಲಕ ಶಾಸಕ ಕೆ.ಎಂ.ಉದಯ್ ತಮ್ಮ ಪ್ರಾಬಲ್ಯ ಸಾಬೀತು ಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!