ಮಕ್ಕಳಿಗೆ ಲೌಕಿಕ ಶಿಕ್ಷಣ ನೀಡುವುದೇ ರಾಷ್ಟ್ರೋತ್ಥಾನ ಮುಖ್ಯ ಉದ್ದೇಶ

KannadaprabhaNewsNetwork | Published : Feb 17, 2025 12:30 AM

ಸಾರಾಂಶ

ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಲೌಕಿಕ ಶಿಕ್ಷಣ ನೀಡುವುದೇ ರಾಷ್ಟ್ರೋತ್ಥಾನದ ಮುಖ್ಯ ಉದ್ದೇಶವಾಗಿದ್ದು, ರಾಷ್ಟ್ರೋತ್ಥಾನ ಎಂಬುದು ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಆರ್.ಎಸ್.ಎಸ್. ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.

ಹಾವೇರಿ:ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಲೌಕಿಕ ಶಿಕ್ಷಣ ನೀಡುವುದೇ ರಾಷ್ಟ್ರೋತ್ಥಾನದ ಮುಖ್ಯ ಉದ್ದೇಶವಾಗಿದ್ದು, ರಾಷ್ಟ್ರೋತ್ಥಾನ ಎಂಬುದು ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಆರ್.ಎಸ್.ಎಸ್. ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.ನಗರದ ಹೊರ ವಲಯದಲ್ಲಿ ದೇವಿಹೊಸೂರ ಗ್ರಾಮದ ಬಳಿ ರಾಜ್ಯದ 20ನೇ ರಾಷ್ಟ್ರೋತ್ಥಾನ ಶಾಲಾ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಹಲವು ವಿಘ್ನಗಳ ನಡುವೆ ತಲೆ ಎತ್ತಿದ ದಾವಣಗೆರೆಯ ರಾಷ್ಟ್ರೋತ್ಥಾನ ಶಾಲೆ ಇಂದು ತನ್ನ ಗುಣಮಟ್ಟದ, ಮೌಲ್ಯಯುತ, ಸಂಸ್ಕಾರಭರಿತ ಶಾಲಾ ಶಿಕ್ಷಣದಿಂದ ಜನಪ್ರಿಯತೆ ಗಳಿಸಿ, ಹೆಸರಾಂತ ಶಾಲೆಯಾಗಿ ಬೆಳೆದಿದೆ. ಅದೇ ರೀತಿ ಈ ಶಾಲೆ ಕೂಡ ಬೆಳೆಯಲಿ ಎಂದು ಹಾರೈಸಿದರು.ಶಾಲಾ ಕಟ್ಟಡದ ಭೂಮಿಪೂಜೆ ನಮ್ಮ ಮೂಲನಂಬಿಕೆ. ಆದರೆ ಕೆಲ ಸ್ವಘೋಷಿತ ಬುದ್ಧಿಜೀವಿ, ಸ್ವಘೋಷಿತ ವಿಚಾರವಾದಿ, ಸ್ವಘೋಷಿತ ಮಾನವತಾವಾದಿಗಳಿಂದ ಇದು ಮೂಢನಂಬಿಕೆ ಎನಿಸಿಕೊಂಡಿದೆ. ಭೂಮಿ ಭೋಗದ ವಸ್ತುವಲ್ಲ, ನಮ್ಮ ಬದುಕಿನ ಆಧಾರ ಮಾತ್ರವಲ್ಲ ಪೋಷಣೆ, ಚೈತನ್ಯ ಅರ್ಥವನ್ನು ನೀಡಿ ಕೃತಜ್ಞತಾ ಭಾವ ಮೂಡಿಸುವಂತದ್ದು. ಭೂಮಿ ಆರಾಧನೆಗಾಗಿ ಇದೆ, ಅದಕ್ಕೆಂದೇ ಮಾತೃಭೂಮಿ ಎನ್ನಲಾಗುತ್ತದೆ. ನಮ್ಮನ್ನು ಹೊತ್ತು ಆಹಾರ, ಪ್ರಾಣವಾಯು, ನೀರು ಒದಗಿಸುವ ಭೂಮಿ ನಮಗೆ ಪೂಜ್ಯನೀಯ. ಅದಕ್ಕಾಗಿ ಅಗತ್ಯ ಬಂದಾಗ ಮಾತೃಭೂಮಿ ಎನಿಸಿಕೊಂಡಿರುವ ದೇಶಕ್ಕಾಗಿ ಜೀವ ನೀಡಲೂ ಸಿದ್ಧರಾಗಬೇಕು ಎಂದರು.ಮ್ಯಾನ್ ಈಸ್ ಆ್ಯನ್ ಎನಿಮಲ್ ಎಂಬುದು ಪಾಶ್ಚಾತ್ಯರ ನಂಬಿಕೆ. ಆದರೆ ಮನುಷ್ಯ ದೈವಾಂಶ ಸಂಭೂತ ಎಂಬುದು ನಮ್ಮ ಮೂಲ ಸಂಸ್ಕೃತಿ, ಇದನ್ನೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಾರೆ. ಸಂಸ್ಕಾರ ಅರಿತ ಸ್ಥಳವೇ ಮನೆ, ಇದು ದೇವಾಲಯ ಇದ್ದಂತೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಇಂಥ ಸಂಸ್ಕಾರಕ್ಕೆ ಒಳಗಾದವರೇ ಮಹಾಮಾನವರು. ರಾಷ್ಟ್ರೋತ್ಥಾನ ಸಂಸ್ಥೆಯಲ್ಲಿ ಶಿಕ್ಷಕ ವ್ಯಾಪಾರ ವೃತ್ತಿಯನಲ್ಲ ಬೋಧನೆ ಅವನ ಧರ್ಮವಾಗಿರಲಿದೆ ಎಂದರು. ಮಕ್ಕಳಲ್ಲಿರುವ ದೈವತ್ವ ಹೊರ ತೆಗೆಯುವುದೇ ಶಿಕ್ಷಣ. ಸಮೃದ್ಧ, ಸಶಕ್ತ, ಸ್ವಸ್ಥ ಭಾರತ ನಿರ್ಮಾಣ ನಮ್ಮ ಪಣ, ನಮ್ಮ ಮಕ್ಕಳಲ್ಲಿ ಭಾರತೀಯತೆ ತುಂಬಲು ನಮಗೆ ಎರಡು ಮಂತ್ರಗಳಿವೆ. ಅದುವೇ ಭಾರತ್ ಮಾತಾಕೀ ಜೈ ಮತ್ತು ವಂದೇ ಮಾತರಂ. ಅದನ್ನು ನಮ್ಮ ಪ್ರಧಾನಿ ಜಗತ್ತಿಗೆ ಕೊಂಡೊಯ್ದರು. ನಮ್ಮ ದೇಶ ಇಂಡಿಯಾ ಅಲ್ಲ, ಭಾರತ ಇದನ್ನು ನಿಮ್ಮ ಅಂತಃಕರಣದಲ್ಲಿ ತುಂಬಿಸಿಕೊಂಡು ಪಾಲಿಸಿ ಎಂದು ಸಲಹೆ ಮಾಡಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ, ಅಗಡಿ ಆನಂದವನದ ಗುರುದತ್ತ ಸ್ವಾಮೀಜಿ ಹಾಗೂ ವಿಶ್ವನಾಥ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಉದ್ಯಮಿ ಪವನಬಹದ್ದೂರ ದೇಸಾಯಿ ಇದ್ದರು. 2026ರ ಜೂನ್‌ನಲ್ಲಿ ಶಾಲಾ ಕಟ್ಟಡ ಉದ್ಘಾಟನೆ: ರಾಜ್ಯದ 9 ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನದ 14 ಸಿಬಿಎಸ್‌ಇ ಶಾಲೆಗಳು ಈಗಾಗಲೇ ಪ್ರಾರಂಭವಾಗಿವೆ. ಇದೇ 2025-26ನೇ ಸಾಲಿನಲ್ಲಿ ಹಾಸನ, ಉಡುಪಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಸಿಬಿಎಸ್‌ಇ ಶಾಲೆಗಳು ಪ್ರಾರಂಭವಾಗುತ್ತಿವೆ. ಅಲ್ಲದೇ 12 ರಾಜ್ಯ ಪಠ್ಯಕ್ರಮದ ಶಾಲೆಗಳೂ ಸಹ ಕಾರ್ಯರಂಭದಲ್ಲಿವೆ. ಪ್ರಸಕ್ತ ಹಾವೇರಿಯ ರಾಷ್ಟ್ರೋತ್ಥಾನ ಶಾಲೆಯ ಕಟ್ಟಡದ ನಿರ್ಮಾಣ ಕಾಮಗಾರಿ 15-20 ದಿನಗಳಲ್ಲಿ ಆರಂಭವಾಗಲಿದ್ದು, ಒಟ್ಟು 1.50 ಲಕ್ಷ ಅಡಿಯಲ್ಲಿ ಶಾಲಾ ಕಟ್ಟಡದ ನೀಲನಕ್ಷೆ ರೂಪಿಸಿಕೊಂಡಿದ್ದು ಮೊದಲ ಹಂತದಲ್ಲಿ ಎಲ್ ಆಕಾರದಲ್ಲಿ ಸುಮಾರು 60 ಸಾವಿರ ಅಡಿಯ ಶಾಲಾಕಟ್ಟಡ ಚಾಲನೆಗೊಳ್ಳಲಿದೆ. 2026ರ ಜೂನ್‌ನಲ್ಲಿ ಶಾಲಾ ಕಟ್ಟಡ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ. ವಿಜಯದಶಮಿಗೆ ಶಾಲೆಯ 1ನೇ ತರಗತಿಯಿಂದ 6ನೇ ತರಗತಿಯವರೆಗೆ ಮಕ್ಕಳ ನೋಂದಣಿ ಆರಂಭಿಸಲಾಗುವುದು. ಇದರಲ್ಲಿ 27 ಕೊಠಡಿಗಳು ಮೈದಾನ, ಹಾಸ್ಟೆಲ್, ಲೈಬ್ರರಿ, ಲ್ಯಾಬ್ ನಿರ್ಮಾಣದ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಪಿಯುಸಿ ಕಾಲೇಜು ಸಹ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಹೇಳಿದರು.

Share this article