ತರೀಕೆರೆ ತಾಲೂಕು ಪಂಚಾಯಿತಿಯಲ್ಲಿ ಬೇಸಿಗೆ ಬೆಸುಗೆ ಶಿಬಿರ ಕಾರ್ಯಕ್ರಮ
ಮಕ್ಕಳೇ, ರಜಾ ಸಮಯವೆಂದರೆ ಕೇವಲ ವಿಶ್ರಾಂತಿಯಲ್ಲ, ಅದು ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವ ಸದವಕಾಶ. ಈ ''''''''ಬೇಸಿಗೆ-ಬೆಸುಗೆ'''''''' ಶಿಬಿರದ ಮುಖ್ಯ ಉದ್ದೇಶವೇ ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರತರುವುದಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಹೇಳಿದ್ದಾರೆ.ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ತರೀಕೆರೆ ತಾಪಂ ಆವರಣದಲ್ಲಿ ನಡೆದ ಬೇಸಿಗೆ-ಬೆಸುಗೆ ಶಿಬಿರ, ಅರಿವು ಕೇಂದ್ರದ ಮಕ್ಕಳಿಗೆ ವಿಶೇಷ ಹೋಬಳಿ ಮಟ್ಟದ ಫೋಟೋಗ್ರಫಿ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಫೋಟೋಗ್ರಫಿ ಕಾರ್ಯಾಗಾರ ಚಿತ್ರಗಳನ್ನು ತೆಗೆಯುವುದನ್ನು ಕಲಿಸುವುದಿಲ್ಲ; ಬದಲಿಗೆ ಜಗತ್ತನ್ನು ಹೊಸ ದೃಷ್ಟಿ ಕೋನದಿಂದ ನೋಡುವುದನ್ನು ಕಲಿಸುತ್ತದೆ. ಕ್ಯಾಮರಾ ಕಣ್ಣಿನ ಮೂಲಕ ನೀವು ಸೆರೆಹಿಡಿಯುವ ಪ್ರತಿಯೊಂದು ಚಿತ್ರವೂ ನಿಮ್ಮ ಕಲ್ಪನಾಶಕ್ತಿ ಪ್ರತಿಬಿಂಬವಾಗಿರುತ್ತದೆ, ಇಂತಹ ಅಪರೂಪದ ತರಬೇತಿ ನಿಮ್ಮಲ್ಲಿ ಹೊಸ ಹವ್ಯಾಸ ಬೆಳೆಸುವ ಜೊತೆಗೆ ನಿಮ್ಮ ಆತ್ಮವಿಶ್ವಾಸಹೆಚ್ಚಿಸುತ್ತದೆ. ಅರಿವು ಕೇಂದ್ರಗಳ ಮೂಲಕ ನಿಮಗೆ ಸಿಗುತ್ತಿರುವ ಈ ವೇದಿಕೆ ಸದುಪಯೋಗ ಪಡಿಸಿಕೊಂಡು, ನಿಮ್ಮ ಪ್ರತಿಭೆ ಮತ್ತಷ್ಟು ಬೆಳಗಿಸಿಕೊಳ್ಳಿ. ಈ ಶಿಬಿರ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿಯಾಗಲಿ ಎಂದು ಆಶಿಸುತ್ತೇನೆ ಎಂದರು.ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ನಥಾನಿಯಲ್ ಅಮನ್ನಾ ಮಾತನಾಡಿ ಇಂದಿನ ಡಿಜಿಟಲ್
ಯುಗಗದಲ್ಲಿ ಸಂವಹನ ಮತ್ತು ತಾಂತ್ರಿಕ ಕೌಶಲಗಳ ಮಹತ್ವ ವಿವರಿಸಿ, ಫೋಟೋಗ್ರಫಿ ಎನ್ನುವುದು ಒಂದು ಮೌನಭಾಷೆ, ಗ್ರಾಮ ಮಟ್ಟದಲ್ಲಿ ಇಂತಹ ವಿನೂತನ ಕಾರ್ಯಾಗಾರ ನಡೆಯುತ್ತಿರುವುದು ಮಕ್ಕಳ ಪ್ರತಿಭೆ ಗುರುತಿಸಲು ಸಹಕಾರಿ, ಕಲಿಯುವ ಆಸಕ್ತಿ ಮಕ್ಕಳಲ್ಲಿ ನಿರಂತರವಾಗಿರಲಿ ಎಂದು ಹೇಳಿದರು.ಕ್ಯಾನನ್ ಸಂಸ್ಥೆಯ ಪರಿಣಿತರಾದ ಮ್ಯಾಥ್ಯೂ ಮಕ್ಕಳಿಗೆ ಛಾಯಾಗ್ರಹಣದ ತಾಂತ್ರಿಕತೆ, ಲೈಟಿಂಗ್ ಮತ್ತು ಆಂಗಲ್‌ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸೈದ್ಧಾಂತಿಕವಷ್ಟೇ ಅಲ್ಲದೆ, ಪ್ರಾಯೋಗಿಕವಾಗಿ ಮಕ್ಕಳು ಕ್ಯಾಮೆರಾ ಬಳಸಿ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ತಮ್ಮ ಸೃಜನಶೀಲತೆ ಪ್ರದರ್ಶಿಸಿದರು. ರಜಾ ಅವಧಿಯಲ್ಲಿ ಮಕ್ಕಳಲ್ಲಿ ಹೊಸ ಹವ್ಯಾಸ ಮತ್ತು ಕಲೆ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಜಿಲ್ಲಾ ಪಂಚಾಯತ್ ಸಹಯೋಗದ ಈ ಕಾರ್ಯಕ್ರಮ ಯಶಸ್ವಿಯಾಯಿತು. ಲಿಂಗದಹಳ್ಳಿ ಗ್ರಾಪಂ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ''''''''ಬೇಸಿಗೆ-ಬೆಸುಗೆ'''''''' ಶಿಬಿರದ ಅಂಗವಾಗಿ ಮಕ್ಕಳಿಗೆ ಅಪೂರ್ವವಾದ ಹೋಬಳಿ ಮಟ್ಟದ ಫೋಟೋಗ್ರಫಿ ಕಾರ್ಯಾಗಾರ ಜರುಗಿತು.-
ತರೀಕೆರೆಯಲ್ಲಿ ಜಿಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಬೇಸಿಗೆ-ಬೆಸುಗೆ ಶಿಬಿರ, ಅರಿವು ಕೇಂದ್ರದ ಮಕ್ಕಳಿಗಾಗಿ ವಿಶೇಷ ಹೋಬಳಿ ಮಟ್ಟದ ಫೋಟೋಗ್ರಫಿ ಕಾರ್ಯಾಗಾರದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ, ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ನಥಾನಿಯಲ್ ಅಮನ್ನಾ ಮತ್ತಿತರರು ಭಾಗವಹಿಸಿದ್ದರು.