- ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಝೇಂಕಾರ
ಹಿರಿಯರಾದ ಹೆಬ್ಬಿಗೆ ಚಂದ್ರಶೇಖರಯ್ಯ ಅವರು ಹೆಬ್ಬಾರ ಬ್ರಾಹ್ಮಣರು ಸಂಘಟಿತರಾಗಬೇಕು ಎಂದು ಕನಸು ಕಂಡಿದ್ದರು. ಈಗ ಅವರ ಕನಸು ಸಾಕಾರಗೊಂಡಿದೆ ಎಂದು ಹಿರಿಯ ಸಹಕಾರಿ ಹಾಗೂ ಕೊಪ್ಪ ಯಸ್ಕಾನ್ ಸಂಸ್ಥೆ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ತಿಳಿಸಿದರು.
ಭಾನುವಾರ ಕೊಪ್ಪದ ಗಾಯಿತ್ರಿ ಸಾಂಸ್ಕೃತಿಕ ಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾ ಕೇಂದ್ರ ಸಮಿತಿ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಝೇಂಕಾರ ಎಂಬ 3 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು. ಈಗ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಮಾಜ ಹೆಮ್ಮರವಾಗಿ ಬೆಳೆದಿದೆ. ರಾಜ್ಯದ ಹಲವು ಜಿಲ್ಲೆ ಗಳಲ್ಲಿ ನಮ್ಮ ಸಮಾಜದ ಘಟಕದವರು ಅದ್ಬುತವಾಗಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ.ಪ್ರತಿ ವರ್ಷ ಶೃಂಗೇರಿಯಲ್ಲಿ ಸಮಾಜದವರು ಒಟ್ಟಾಗಿ ಗುರು ದರ್ಶನ ಮಾಡುತ್ತಿದ್ದೇವೆ. ಪ್ರತಿ ಘಟಕದಲ್ಲಿ ಹಿರಿಯರನ್ನು ಗೌರವಿಸುವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತೇವೆ. ಸರಿಯಾದ ಗುರಿ ಇಟ್ಟುಕೊಂಡು ನಮ್ಮ ಸಮಾಜ ಮುನ್ನೆಡೆಯುತ್ತಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆ ತೋಟ ಮಾತನಾಡಿ, 3 ನೇ ವರ್ಷದಲ್ಲಿ ನಮ್ಮ ಸಮಾಜದಿಂದ ಝೇಂಕಾರ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ. ಝೇಂಕಾರ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದವರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಬ್ಬಾರ ಸಮಾಜದ 10 ಘಟಕದಿಂದಲೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಸಮಿತಿ ಹಾಗೂ ಘಟಕದ ಎಲ್ಲಾ ಸದಸ್ಯರ ಸಹಕಾರದಿಂದ ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಹೆಬ್ಬಾರ ಸಮಾಜದ ಕೇಂದ್ರೀಯ ಆಡಳಿತ ಮಂಡಳಿ ಗೌರವಾಧ್ಯಕ್ಷ ಜಿ.ಸಿ.ಗೋಪಾಲಕೃಷ್ಣ ಮಾತನಾಡಿ, ಕಳೆದ 22 ವರ್ಷಗಳ ಹಿಂದೆ ಪ್ರಾರಂಭವಾದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಮಹಾ ಸಭಾ ಈಗ ಹೆಮ್ಮರವಾಗಿ ಬೆಳೆದಿದೆ. ಕೋಟಿ ಗಾಯಿತ್ರಿ ಜಪ ಮಾಡಿದ್ದೇವೆ. ಮಹಿಳಾ ಘಟಕ ಹಾಗೂ ಯುವ ಘಟಕವನ್ನು ಹುಟ್ಟು ಹಾಕಿದ್ದೇವೆ. ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂತಹ ವೇದಿಕೆಗಳಲ್ಲಿ ನಮ್ಮ ಸಮಾಜದವರು ತಮ್ಮ ಪ್ರತಿಭೆ ಅಭಿವ್ಯಕ್ತ ಪಡಿಸುತ್ತಿದ್ದಾರೆ ಎಂದರು.ಸಭೆಯಲ್ಲಿ ಕೇಂದ್ರೀಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ವೈ.ಎಸ್.ರಾಮಚಂದ್ರ, ಗಣೇಶ್ ಹೆಬ್ಬಿಗೆ, ಸಂಘಟನಾ ಕಾರ್ಯದರ್ಶಿ ರಚನಾ ಶ್ರೀರಂಗ, ಸಾಮಾಜಿಕ ಸಮಿತಿ ಸಂಚಾಲಕ ಕರಿಗೆರಸಿ ಶಶಿಧರ, ಧಾರ್ಮಿಕ ಸಮಿತಿ ಸಂಚಾಲಕ ಗಾಡಿಕೆರೆ ಸತ್ಯನಾರಾಯಣ,ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ ಇದ್ದರು.
ನಂತರ ಸಮಾಜದ ಸದಸ್ಯರಿಗಾಗಿ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆ, ಪುರುಷರಿಗೆ ಕ್ಲೇ ಮಾಡಲಿಂಗ್, ಮಕ್ಕಳಿಗಾಗಿ ಛದ್ಮವೇಷ, ಸೋಲೋ ಫ್ಯಾಷನ್ ಷೋ, ಜಾನಪದ ಗೀತೆ, ಸಮೂಹ ನೃತ್ಯ ಸ್ಪರ್ಧೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ಮಧುಕರ,ಚಂದ್ರಮೋಹನ್, ಮಂಜುಳಾ ಇದ್ದರು.