ಕೈಬೀಸಿ ಕರೆಯುತ್ತಿದೆ ಮಲೆನಾಡು ಕರಕುಶಲ ಉತ್ಸವ

KannadaprabhaNewsNetwork |  
Published : Jan 25, 2026, 01:45 AM IST
ಪೋಟೋ: 24ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಮೈದಾನದಲ್ಲಿ (ಫ್ರೀಡಂ ಪಾರ್ಕ್)ದಲ್ಲಿ ಹಮ್ಮಿಕೊಳ್ಳಲಾಗಿರುವ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63ನೇ ಫಲ ಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕರಿಸಿದ್ದ ಅಲ್ಲಮ ಪ್ರಭು ಅವರ ಪ್ರತಿಮೆ.  | Kannada Prabha

ಸಾರಾಂಶ

ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಜ.24 ರಿಂದ 27 ರವರೆಗೆ ನಗರದ ಮೈದಾನದಲ್ಲಿ (ಫ್ರೀಡಂ ಪಾರ್ಕ್)ದಲ್ಲಿ ಹಮ್ಮಿಕೊಳ್ಳಲಾಗಿರುವ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63ನೇ ಫಲ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಜ.24 ರಿಂದ 27 ರವರೆಗೆ ನಗರದ ಮೈದಾನದಲ್ಲಿ (ಫ್ರೀಡಂ ಪಾರ್ಕ್)ದಲ್ಲಿ ಹಮ್ಮಿಕೊಳ್ಳಲಾಗಿರುವ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63ನೇ ಫಲ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ಜಿಪಂ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳ ಮಳಿಗೆಗಳು, ಹ್ಯಾಂಡ್ ಲೂಂ ಸೀರೆಗಳ ಮಳಿಗೆಗಳು ಸೇರಿದಂತೆ ಒಟ್ಟು 76 ಮಳಿಗೆಗಳನ್ನು ತೆರೆಯಲಾಗಿದೆ.

ವಿಶೇಷತೆಗಳು: ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚಿಸಲಾಗಿದೆ. ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಎಲ್ಲರ ಗಮನ ಸೆಳೆಯುತ್ತಿದೆ.

ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಯಂತೂ ಈ ಬಾರಿಯ ಆಕರ್ಷಣೆಯಾಗಿದೆ., ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಬಳಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಮಾರಾಟ ಮೇಳ - ಕ್ರಾಫ್ಟ್ಸ್‌ಆಫ್ ಮಲ್ನಾಡ್: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು, ಕ್ರಾಫ್ಟ್ಸ್‌ಆಫ್ ಮಲ್ನಾಡ್ ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಈ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಿದ್ದು, ಇಲ್ಲಿ ಮಹಿಳೆಯರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾ ಖರೀದಿಸುತ್ತಿದ್ದರು.

ಮೇಳದ ವೈಶಿಷ್ಟ್ಯಗಳು: ಮೇಳದ ಮಳಿಗೆಗಳಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣಗಳು, ಮರದ ಕೆತ್ತನೆಗಳು, ಖೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಫೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೆದರ್ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು, ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳ ಮಳಿಗೆಗಳು ಹಾಗೂ ಅಕ್ಕ ಕೆಫೆಯ ಸದಸ್ಯರು, ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ತಯಾರಾದ ಆಹಾರ ಉತ್ಪನ್ನಗಳ ಮಳಿಗೆ ಹಾಗೂ ವಿಶೇಷವಾಗಿ ಸಿರಿಧಾನ್ಯ ಖಾದ್ಯಗಳ ಮಳಿಗೆ ಮುಂದೆ ಹೆಚ್ಚಿನ ಜನರಿದ್ದು ಖಾದ್ಯಗಳನ್ನು ಸವಿಯುತ್ತಿದ್ದರು.

ಹಾಗೂ ರೈತರು ಬೆಳೆದ ವಿವಿಧ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿವೆ.ಮಗ್ಗ ಜವಳಿ ಮೇಳ: ಜವಳಿ ಮತ್ತು ಕೈಮಗ್ಗ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ 11 ರಾಜ್ಯಗಳು 19 ಜಿಐ ಟ್ಯಾಗ್ ಹೊಂದಿರುವ ವಿವಿಧ ರೀತಿಯ ಸೀರೆಗಳು, ಹ್ಯಾಂಡ್‌ಲೂಂ ಸೀರೆಗಳು, ಶಾಲುಗಳು, ಬೆಡ್ ಶೀಟ್‌ಗಳು ಮತ್ತ ಕೆಎಸ್‌ಐಸಿ ಸೀರೆಗಳ ಪ್ರದರ್ಶನ ಮತ್ತು ಮಾರಾಟವಿದ್ದು, ವೆಸ್ಟ್ ಬೆಂಗಾಲ್, ಆಂಧ್ರ, ತಮಿಳುನಾಡು, ಕಾಶ್ಮೀರ ದೇಶದ ಹಲವು ರಾಜ್ಯಗಳ ಹ್ಯಾಂಡ್ ಲೂಂ ಸೀರೆಗಳ ಮಾರಾಟ ಮಳಿಗೆಗಳಿವೆ.

ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (ಕೆಎಸ್‌ಐಸಿ) ಮೈಸೂರು ಸಿಲ್ಕ್ ಸೀರೆಗಳ ಮಳಿಗೆ, ಮೊಳಕಾಲ್ಮೂರು ಸೀರೆಗಳ ಮಳಿಗೆಗಳ ಎದುರು ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಫಲಪುಷ್ಪ ಪ್ರದರ್ಶನಕ್ಕೆ ಬೆಳಗ್ಗೆಯಿಂದ ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!