ಗೋವಿನಕೋವಿ ವೃದ್ಧೆಗೆ ಹಲ್ಲೆ ನಡೆಸಿದ್ದು ಅಳಿಯನ ಸ್ನೇಹಿತ!

KannadaprabhaNewsNetwork |  
Published : Aug 23, 2025, 02:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಒಬ್ಬಂಟಿ ವೃದ್ಧೆ ಮೇಲೆ ತೀವ್ರ ಹಲ್ಲೆ ಮಾಡಿ, 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ, ಚಿನ್ನದ ಸರ ಜಪ್ತಿ ಮಾಡಿದ್ದಾರೆ.

- ಚಿನ್ನದ ಸರ ಸುಲಿಗೆ ಪ್ರಕರಣ ಆರೋಪಿ ದೊಡ್ಡೇರಿ ಪರಶುರಾಮ ಬಂಧನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಒಬ್ಬಂಟಿ ವೃದ್ಧೆ ಮೇಲೆ ತೀವ್ರ ಹಲ್ಲೆ ಮಾಡಿ, 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ, ಚಿನ್ನದ ಸರ ಜಪ್ತಿ ಮಾಡಿದ್ದಾರೆ.

ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದ ಪರಶುರಾಮ ಅಲಿಯಾಸ್ ಹೊಸಳ್ಳಿ ಪರಶುರಾಮ (43) ಬಂಧಿತ ಆರೋಪಿ. ಗೋವಿನಕೋವಿಯ ಹಾಲಮ್ಮ ಬಸಪ್ಪ (75) ಆ.17ರ ಸಂಜೆ ಮನೆಯಲ್ಲಿ ಒಬ್ಬರೇ ಇದ್ದರು. ಆಗ ಆರೋಪಿ ಹೊಸಳ್ಳಿ ಪರಶುರಾಮ ಹಾಲಮ್ಮನ ಮೇಲೆ ತೀವ್ರ ಹಲ್ಲೆ ನಡೆಸಿ, ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಬಗ್ಗೆ ದೂರು ದಾಖಲಾಗಿತ್ತು.

ಪ್ರಕರಣ ಭೇದಿಸಲು ನ್ಯಾಮತಿ ಇನ್‌ಸ್ಪೆಕ್ಟರ್‌ ಎನ್.ಎಸ್.ರವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 22ರಂದು ಆರೋಪಿ ಪರಶುರಾಮ ಅಲಿಯಾಸ್ ಹೊಸಳ್ಳಿ ಪರಶುರಾಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಹಾಲಮ್ಮ ಅವರ ಮಗಳ ಗಂಡ ಯೋಗೇಶಪ್ಪನ ಸ್ನೇಹಿತನಾಗಿದ್ದಾನೆ.

2 ತಿಂಗಳ ಹಿಂದೆ ಪರಶುರಾಮನು ಹಾಲಮ್ಮನ ಮನೆಗೆ ಯೋಗೇಶಪ್ಪನ ಜೊತೆಗೆ ಹೋಗಿದ್ದ. ಈ ವೇಳೆ ಹಾಲಮ್ಮ ಚಿನ್ನದ ಸರ ಧರಿಸಿದ್ದು, ಒಬ್ಬಂಟಿಯಾಗಿ ಮನೆಯಲ್ಲಿ ಇರೋದನ್ನು ಗಮನಿಸಿದ್ದಾನೆ. ಆ.17ರ ಸಂಜೆ ಹಾಲಮ್ಮನ ಮನೆಗೆ ಬಂದಿದ್ದ ಆತ ದನ ಕಳೆದುಹೋಗಿದ್ದು ಹುಡುಕುತ್ತಾ ಬಂದಿದ್ದಾಗಿ ನಂಬಿಸಿದ್ದಾನೆ. ಹಾಲಮ್ಮ. ಅಳಿಯನ ಸ್ನೇಹಿತ ಅಂತ ಪರಶುರಾಮನಿಗೆ ಚಹಾ ಮಾಡಿಕೊಡಲು ಅಡುಗೆ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಹಿಂದಿನಿಂದ ಬಂದು ಹಾಲಮ್ಮನ ಮೇಲೆ ಹಲ್ಲೆ ನಡೆಸಿದ್ದಾನೆ. ಕುಸಿದು ಬಿದ್ದ ಹಾಲಮ್ಮನನ್ನು ನೋಡಿ, ಗಾಬರಿಗೊಂಡು ಅಲ್ಲಿಂದ ಓಡಿಹೋಗಿದ್ದಾನೆ.

ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದ 30 ಗ್ರಾಂ ಚಿನ್ನದ ಸರವನ್ನು ಗಾಯಾಳು ಹಾಲಮ್ಮನ ಮನೆಯಲ್ಲೇ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿರ್ಯಾದಿಗೆ ಕಳುವಾದ ಚಿನ್ನದ ಸರ ಹಿಂದಿರುಗಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ