ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಯಾವುದೇ ಸರ್ಕಾರ ಇರಲಿ ತಮ್ಮ ಕೆಲಸಗಳು ಆಗಬೇಕಾದರೆ ಮರಾಠ ಜನಾಂಗ ಒಗ್ಗಟಾಗಿ ತಮ್ಮ ಶಕ್ತಿ ಪ್ರದರ್ಶಿಸಬೇಕು. ಆಗ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್0 ತಿಳಿಸಿದರು.ಅವರು ಬಸವಕಲ್ಯಾಣದಲ್ಲಿ ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಶಿವಾಜಿ ಪಾರ್ಕ್ ಕೆಲಸ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡಿದರು.ಕೆಕೆಆರಡಿಬಿ ಅಧ್ಯಕ್ಷರ ಅನುದಾನದಡಿ ನಿರ್ಮಿಸಲಾಗುತ್ತಿರುವ ಶಿವಾಜಿ ಪಾರ್ಕ್ ಕೆಲಸ ಕಾಮಗಾರಿಗಳಿಗೆ ಸುಮಾರು ₹1.50 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ ಟೌನಹಾಲ್ ಮತ್ತು ಶಿವಾಜಿ ಪಾರ್ಕ್ ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಪ್ರಯತ್ನದ ಫಲವಾಗಿ ಶಿವಾಜಿ ಪಾರ್ಕ್ ಕೆಲಸ ಕಾಮಗಾರಿ ನಡೆಯುತ್ತಿವೆ ಎಂದರು.ಇದೇ ರೀತಿ ಬಸವಕಲ್ಯಾಣದಲ್ಲಿ ಶಿವಸೃಷ್ಠಿ ಸ್ಮಾರಕ ನಿರ್ಮಾಣಕ್ಕೆ 10 ಎಕರೆ ಜಮೀನು ಮತ್ತು 10 ಕೋಟಿ ಹಣ ಮಂಜೂರಾಗಿದೆ. ಆದರೆ ಕೆಲಸ ಪ್ರಾರಂಭಿಸಲು ವಿಳಂಬವಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಭೇಟಿಯಾಗಿ ಕೆಲಸ ಪುನರಾರಂಭಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಕಾರ್ಮಿಕ ಇಲಾಖೆಯಲ್ಲಿ ಸಹ ಅನೇಕ ರೀತಿಯ ಯೋಜನೆಗಳಿವೆ. ಬಡವರಿಗೆ, ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಮುಂತಾದ ಕಾರ್ಯಕ್ಕೆ ಅನುದಾನ ಹಾಗೂ ಸಹಾಯ ಮಾಡಲಾಗುತ್ತಿದೆ. ಬಹಳಷ್ಟು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮರಾಠ ಜನಾಂಗಕ್ಕೆ ಬಹಳಷ್ಟು ಪ್ರಾತಿನಿಧ್ಯ ನೀಡಲಾಗಿದೆ. ಇದನ್ನು ನಮ್ಮ ಸಮಾಜದವರು ಅರ್ಥ ಮಾಡಿಕೊಳ್ಳಬೇಕು ಎಂದರು.ದಿ. ಧರ್ಮಸಿಂಗ ಅವರು ಮುಖ್ಯಮಂತ್ರಿಯಾಗಿದ್ದಾಗ, ನಮ್ಮ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿದ್ದರು. ಅವರಂತೆ ಅವರ ಮಕ್ಕಳು ಸಹ ನಮ್ಮ ಸಮಾಜದ ಅಭಿವೃದ್ಧಿಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ನಮ್ಮ ಸಮಾಜದ ಜನರು ಅವರ ಹಿಂದೆ ಇರಬೇಕು ಎಂದು ಮನವಿ ಮಾಡಿದರು. ಈ ತಾಲೂಕಿನಲ್ಲಿ ಬಹು ಸಂಖ್ಯೆಯಲ್ಲಿರುವ ಮರಾಠ ಜನಾಂಗ ಒಗ್ಗಟಾಗಿದಾಗ ಮಾತ್ರ, ರಾಜಕೀಯ ಹೋರಾಟ ಅಥವಾ ಸಾಮಾಜಿಕ ಹೋರಾಟದಲ್ಲಿ ಜಯ ಸಾಧಿಸಲು ಸಾಧ್ಯವೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಮರಾಠಾ ಸಮಾಜದ ಮುಖಂಡರು ಹಾಗೂ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯಾ, ಸಂಸದ ಸಾಗರ ಖಂಡ್ರೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಶಾಸಕ ಶರಣು ಸಲಗರ, ವಿಧಾನಪರಿಷತ ಸದಸ್ಯ ಎಂ.ಜಿ ಮೂಳೆ, ಡಾ. ಚಂದ್ರಶೇಖರ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಡಾ. ಪ್ರಕಾಶ ಪಾಟೀಲ, ರವಿ ಗಾಯಕವಾಡ, ಮೀರ ಅಜರಲಿ ನವರಂಗ, ನೀಲಕಂಠ ರಾಠೋಡ, ತಹಸೀನಅಲಿ ಜಮಾದಾರ, ಮುಜಾಹೀದ ಪಾಶಾ ಖುರೇಶಿ ಮುಂತಾದವರು ಉಪಸ್ಥಿತರಿದ್ದರು.