ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್

KannadaprabhaNewsNetwork |  
Published : Oct 25, 2026, 02:15 AM IST
ಕೊಂಕಣಿ ಸಿರಿ ಸಂಪದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.  | Kannada Prabha

ಸಾರಾಂಶ

ಯುವ ಪೀಳಿಗೆಗೆ ನಶಿಸುತ್ತಿರುವ ಜಾನಪದ ಕಲೆಗಳ ಪರಿಚಯವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮಾಡಿಕೊಡುತ್ತಿರುವುದು ವಿಶೇಷವಾಗಿದೆ.

ಕಾರವಾರ: ಕೊಂಕಣಿ ಭಾಷಿಕರು ಜಗತ್ತಿನ ಎಲ್ಲ ಭಾಗಗಳಲ್ಲಿಯೂ ನೆಲೆಸಿದ್ದು, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ತಾವು ನೆಲೆಸಿರುವ ಪ್ರದೇಶಗಳಲ್ಲಿ ಉಪ್ಪಿನಂತೆ ರುಚಿಯನ್ನು ಉಣಬಡಿಸುತ್ತಿದ್ದಾರೆ ಎಂದು ಕಾಜುಬಾಗ ಕ್ಯಾಥೆಡ್ರಲ್ ಚರ್ಚಿನ ಧರ್ಮಗುರು ವಂ. ಫಾದರ್ ಥಾಮಸ್ ಫರ್ನಾಂಡೀಸ್ ಹೇಳಿದರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕಾರವಾರದ ಕೊಂಕಣಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಕಾರವಾರದ ಬಾಡದಲ್ಲಿರುವ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬೊಬಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೊಂಕಣಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮೇಳನಾಧ್ಯಕ್ಷರಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಉದಯ ರಾಯ್ಕರ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ದಶಕಗಳಿಂದ ನೆಲೆಸಿರುವ ಕೊಂಕಣಿ ಭಾಷಿಕರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿ, ಅಧ್ಯಯನ, ಸಂಶೋಧನೆ ಮತ್ತು ಕಾರ್ಯಾಗಾರಗಳನ್ನು ನಡೆಸುವ ಉದ್ದೇಶದಿಂದ 2019ರಲ್ಲಿ ಕೊಂಕಣಿ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ. ಆದರೆ, ಮಂಜೂರಾಗಿದ್ದ ₹1 ಕೋಟಿ ಅನುದಾನ ಸ್ಥಗಿತಗೊಂಡಿರುವುದರಿಂದ ಪೀಠದ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದರು.ಗೌರವ ಅತಿಥಿಯಾಗಿದ್ದ ಸಂಗೀತ ಗುರು ಪಂಡಿತ ಚಂದ್ರಕಾಂತ ವಿಶ್ವನಾಥ ಗಡಕರ ಅವರು, ಮನೆಗಳಲ್ಲಿ ಕೊಂಕಣಿ ಮಾತೃಭಾಷೆಯ ಬಳಕೆಗೆ ಆದ್ಯತೆ ನೀಡಬೇಕು. ಯುವ ಪೀಳಿಗೆಗೆ ನಶಿಸುತ್ತಿರುವ ಜಾನಪದ ಕಲೆಗಳ ಪರಿಚಯವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮಾಡಿಕೊಡುತ್ತಿರುವುದು ವಿಶೇಷವಾಗಿದೆ ಎಂದರು.ಇನ್ನೋರ್ವ ಅತಿಥಿ ಕಾರವಾರದ ಸೇಂಟ್ ಮಿಲಾಗ್ರಿಸ್ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಕಾರವಾರದಲ್ಲಿ ಇಂತಹ ಕೊಂಕಣಿ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ಯುವ ಪೀಳಿಗೆಯಲ್ಲಿ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಲು ಅನುಕೂಲವಾಗುತ್ತಿದೆ ಎಂದರು.ಆರಂಭದಲ್ಲಿ ಡಾ. ವಸಂತ ಬಾಂದೇಕರ ಸ್ವಾಗತಿಸಿ ಪ್ರಸ್ತಾವನೆ ಮಂಡಿಸಿದರು. ಕೊಂಕಣಿ ಸಾಹಿತ್ಯ ಅಕಾಡಮಿಯ ಸದಸ್ಯ ಸುನೀಲ ಸಿದ್ದಿ ಸಭಾಧ್ಯಕ್ಷತೆ ವಹಿಸಿ, ಅಕಾಡಮಿಯ ಕಾರ್ಯಚಟುವಟಿಕೆಗಳು ಹಾಗೂ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಅಕಾಡೆಮಿಯಿಂದ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಕೊಂಕಣಿ ಸಿರಿ ಸಂಪದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬಳಿಕ ನಡೆದ ಕೊಂಕಣಿ ನಿನ್ನೆ- ಇಂದು- ನಾಳೆ ಎಂಬ ವಿಷಯದ ವಿಚಾರಸಂಕಿರಣದಲ್ಲಿ ಡಾ. ಅರವಿಂದ ಶಾನಭಾಗ ಹಾಗೂ ಸ್ಟಿವನ್ ಕ್ವಾಡ್ರಾಸ್ ಮಾತನಾಡಿದರು.

ವಸಂತ ಬಾಂದೇಕರ ದಂಪತಿಯನ್ನು ಸನ್ಮಾನಿಸಲಾಯಿತು. ನಂತರ ಜಿಲ್ಲೆಯ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು. ಹಳಿಯಾಳದ ಜ್ಯೂಲಿಯಾನಾ ಸಿದ್ದಿ ತಂಡದಿಂದ ಸಿದ್ದಿ ಡಮಾಮಿ ನೃತ್ಯ, ಕೊಂಕಣ ಖಾರ್ವಿ ನೃತ್ಯ, ಶಿರಸಿಯ ಮನೋಜ ಪಾಲೇಕರ ತಂಡದಿಂದ ಗೊಂಬೆಯಾಟ ಹಾಗೂ ವಸಂತ ಬಾಂದೇಕರ ಅವರ ಮಿಮಿಕ್ರಿ ಪ್ರೇಕ್ಷಕರನ್ನು ರಂಜಿಸಿದವು.ವಸಂತ ಬಾಂದೇಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಕಾಡೆಮಿಯ ಸಿಬ್ಬಂದಿಯಾದ ರೆನಿತಾ, ರೋನಾ ಲೋಬೋ ಹಾಗೂ ಲ್ಯಾನ್ವಿಟಾ ಕುಟಿನ್ಹೋ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ
ಕೈಗಾ ಯೋಜನೆಗೆ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ