ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಸಂವಿಧಾನದ ಆಶಯದಂತೆ, ನ್ಯಾ.ನಾಗಮೋಹನದಾಸ್ ಹಾಗೂ ನ್ಯಾ.ಸುಭಾಷ ಆಡಿ ಆಯೋಗದ ವರದಿಗಳ ಆಧಾರದ ಮೇಲೆ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಿ 2022ರಲ್ಲಿ ಕಾಯ್ದೆ ಜಾರಿಗೆ ತರಲಾಯಿತು.
ಈ ಕಾಯ್ದೆಯನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸದ ಕಾರಣ ಇತ್ತೀಚೆಗೆ ಹೈಕೋರ್ಟ ಶೇ. 56ರಷ್ಟು ಮೀಸಲಾತಿಗೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ 2023-24 ಮತ್ತು 2024-25ನೇ ಸಾಲಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆದ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ಜನರಿಗೆ ಭಾರೀ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡರೂ, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಮೀಸಲಾತಿ ರಕ್ಷಣೆ ವಿಚಾರವಾಗಿ ರಾಜ್ಯ ಸರ್ಕಾರ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆಯಬೇಕು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವು ದೆಹಲಿಗೆ ಕೊಂಡೊಯ್ದು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಕಾಯ್ದೆಯನ್ನು 9ನೇ ಷೆಡ್ಯೂಲ್‌ಗೆ ಸೇರಿಸಲು ಒತ್ತಾಯಿಸಬೇಕೆಂದರು. ಹೈಕೋರ್ಟನಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಸಮರ್ಥ ವಕೀಲರನ್ನು ನೇಮಿಸಬೇಕು. ಒಂದು ವೇಳೆ ಅಲ್ಲಿ ತೆರವಾಗದಿದ್ದರೆ, ಸುಪ್ರೀಂ ಕೋರ್ಟನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎಂ.ನರಸಿಂಹಯ್ಯ, ರಾಜ್ಯ ಉಪಾಧ್ಯಕ್ಷ ರಾಜಣ್ಣ ಚಿತ್ರದುರ್ಗ, ಖಜಾಂಚಿ ರಾಜಪ್ಪ ಬೆಂಗಳೂರು, ರಾಯಚೂರು ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ, ಜಿಲ್ಲಾ ಮಹಾಸಭಾ ಅಧ್ಯಕ್ಷ ದಶರಥ ಜಮಾದಾರ, ಯುವ ಘಟಕದ ಜಿಲ್ಲಾಧ್ಯಕ್ಷ ದಿಲೀಪ ಪಾಟೀಲ್, ಜೈಶ್ರೀ, ಪ್ರಕಾಶ ದೇಸಾಯಿ, ಭೂವಿ ಸಮಾಜದ ಶೈಲೇಶ, ವಾಲ್ಮೀಕಿ ನಾಯಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಗೌರವಾಧ್ಯಕ್ಷ ಮನೋಹರ್ ಕಂಟೆ, ಶರಣಪ್ಪ ಖಾಶೆಂಪುರ, ಷಣ್ಮುಖಪ್ಪ ಶೇಕಾಪುರ, ಸೇರಿದಂತೆ ಸಮಾಜದ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.