ಕನ್ನಡಪ್ರಭ ವಾರ್ತೆ, ತುಮಕೂರುನಮ್ಮ ಸಮಾಜದಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ವಿಷ ಬೀಜ ಬಿತ್ತುವವರ ಸಂಖ್ಯೆ ಹೆಚ್ಚಾಗಿದೆ. ಇಂತಹವರ ನಡುವೆ ನಮ್ಮತನ ಕಾಪಾಡಿಕೊಂಡು ಬೆಳೆಯಬೇಕಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸಲಹೆ ನೀಡಿದರು. ನಗರದ ಜನ ಚಳುವಳಿ ಕೇಂದ್ರದಲ್ಲಿ ದಾರಿಬುತ್ತಿಯ ಮೂರನೇ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವಿಕಾಸ್ ನ ಗಿಡದ ಹಾಡು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾವು ಎಂತಹ ಬೀಜ ಬಿತ್ತುವೆವೋ ಅಂತಹ ಗಿಡ ಹುಟ್ಟುತ್ತದೆ, ಹಾಗೆಯೇ ನಾವು ಎಂತಹವರ ಸಹವಾಸದಲ್ಲಿ ಇರುತ್ತೇವೆಯೋ ಅಂತಹ ಗುಣ ಲಕ್ಷಣಗಳು ನಮ್ಮೊಳಗೆ ಇರುತ್ತವೆ ಎಂದರು.ಇಂದು ಬಿಡುಗಡೆಗೊಂಡ ವಿಕಾಸನ ಗಿಡದ ಹಾಡು ಕೃತಿ ಬಹು ಮಹತ್ವದ್ದು. ಇಲ್ಲಿನ ಕವಿತೆಗಳು ಎರಡು-ಮೂರು ಸಾಲುಗಳವು. ಆದರೆ, ಇವನ್ನು ನಾನು ಕಿರು ಕವನಗಳು ಎಂದು ಕರೆಯುವುದಿಲ್ಲ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸೂಳೆ ಸಂಕವ್ವೆಯರ ವಚನಗಳೂ ಹೀಗೆ 4-5 ಸಾಲಿನವೇ. ಆದರೇ ಇವು ಮಹಾಕಾವ್ಯಗಳನ್ನು ತಲೆತಗ್ಗಿಸುವಂತೆ ಮಾಡುವಷ್ಟು ಶಕ್ತಿಯುತವಾದವು. ಇದಕ್ಕೆ ಕಾರಣ ಇವು ಸಮುದಾಯ ಪ್ರೀತಿಯನ್ನು, ಜೀವ ಪ್ರೀತಿಯನ್ನು ಬೆಳೆಸುವಂತಹ ಸಾಲುಗಳು. ಹೀಗಾಗಿಯೇ ಇವು ನಮ್ಮೊಂದಿಗೆ ಚಿರಕಾಲ ಇದ್ದು, ನಮ್ಮನ್ನು ಕುಶಿಯಿಂದ ಬದುಕುವಂತೆ ಮಾಡುತ್ತವೆ. ಅದೇ ರೀತಿಯ ಶಕ್ತಿ ವಿಕಾಸನ ಸಾಲುಗಳಿಗಿದೆ. ಆಳವಾದ ತಾತ್ವಿಕ ಚಿಂತನೆಗೆ ಹಚ್ಚುವ ಕೆಲಸವೂ ಇಲ್ಲಿದೆ. ಪ್ರಕೃತಿಯ ಜೊತೆ ಸಂಬಂಧ ಇಟ್ಟುಕೊಂಡಿರುವವರು, ಜೀವ ಪ್ರೀತಿಯನ್ನು ಎದೆಯೊಳಗೆ ಹುದುಗಿಸಿಕೊಂಡಿರುವವರು ಮಾತ್ರ ಇಂತಹ ಸಾಲುಗಳನ್ನು ಬರೆಯಬಲ್ಲರು, ಜೀವಿಸಬಲ್ಲರು. ಇಂತಹ ಕೃತಿಗಳನ್ನು ಬೆಳೆಸಬೇಕು ಮತ್ತು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಕವಿ, ಕಲಾವಿದ ಗೋಮಾರದನಹಳ್ಳಿ ಮಂಜುನಾಥ್ ಮಾತನಾಡಿದರು. ಕೆ. ವಿ. ವೀರಲಿಂಗನಗೌಡರ ಔಷಧಿ ರಶೀದಿಗಳು ಕೃತಿಯನ್ನು ಬಿಡುಗಡೆಗೊಳಿಸಿದರು. ಸಾಹಿತಿ ಹಡವನಹಳ್ಳಿ ವೀರಣ್ಣಗೌಡ, ಬಾ. ಹ. ರಮಾಕುಮಾರಿ, ದಾರಿಬುತ್ತಿ ಪ್ರಶಸ್ತಿ ಪುರಸ್ಕೃತರಾರದ ಇಂದಿರಮ್ಮ, ಜಭೀವುಲ್ಲಾ ಎಂ ಅಸದ್, ಕೆ.ಎಸ್ ಗಿರಿಜಾ, ಧನಪಾಲ ನಾಗರಾಜಪ್ಪ, ದಾರಿಬುತ್ತಿ ಬಳಗದ ಸದಸ್ಯರು, ಹಾಜರಿದ್ದರು. ರಂಗಮ್ಮ ಹೊದೇಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ದಾದಪೀರ್ ಸ್ವಾಗತಿಸಿದರು, ಮೇಘನಾ ಕಾರ್ಯಕ್ರಮ ನಿರೂಪಿಸಿದರು.