ಹೊಸಕೋಟೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸ್ವಂತ ಜಾಗ: ವಕೀಲರ ದಶಕಗಳ ಕನಸು ನನಸು

KannadaprabhaNewsNetwork |  
Published : Nov 20, 2026, 01:45 AM IST
ಫೋಟೋ: 18 ಹೆಚ್ ಎಸ್ ಕೆ 1ಹೊಸಕೋಟೆ ತಾಲೂಕು ಜೆಎಂಎಫ್‌ಸಿ ನ್ಯಾಯಾಲಯ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ ಜಾಗವನ್ನು ಸರ್ಕಾರ ಅಧಿಕೃತವಾಗಿ ಹಸ್ತಾಂತರಿಸಿ, ನ್ಯಾಯಾಲಯದ ಹೆಸರಿಗೆ ಪಹಣಿಯನ್ನೂ ಸಿದ್ಧಪಡಿಸಿದ್ದು ವಕೀಲರ ಸಂಘದ ಅಧ್ಯಕ್ಷ ರಾಧಾಕೃಷ್ಣ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಬದಲಿ ಜಾಗ ಮಂಜೂರು: ನ್ಯಾಯಾಲಯಕ್ಕೆ ಜಾಗ ನೀಡಿದ ತೋಟಗಾರಿಕೆ ಇಲಾಖೆಗೆ ಜಡಿಗೇನಹಳ್ಳಿ ಹೋಬಳಿ ತವಟಹಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ 4 ಎಕರೆ 20 ಗುಂಟೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ಮೀಸಲಿಡುವುದರ ಜೊತೆಗೆ, ನಿರ್ಮಾಣವಾಗುತ್ತಿರುವ ಪ್ರಜಾಸೌಧದಲ್ಲಿ ಇಲಾಖೆಯ ಕಚೇರಿಗೂ ಸ್ಥಳಾವಕಾಶ ಕಲ್ಪಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ದಂಡುಪಾಳ್ಯ ಗ್ರಾಮದ ಸರ್ವೇ ನಂ.೧೦೯ರಲ್ಲಿನ ಎರಡು ಎಕರೆ ೩೩ ಗುಂಟೆ ಜಾಗವನ್ನು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಸಮ್ಮತಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

1997ರಲ್ಲಿ ಬೆಂಗಳೂರಿನಿಂದ ಹೊಸಕೋಟೆಗೆ ವರ್ಗಾವಣೆಯಾದಾಗಿನಿಂದ ಸ್ವಂತ ಜಾಗ ಮತ್ತು ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಹೊಸಕೋಟೆ ನ್ಯಾಯಾಲಯಕ್ಕೆ ಇದೀಗ ಶಾಶ್ವತ ಜಾಗ ದೊರೆತಿದ್ದು, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ ಜಾಗವನ್ನು ಸರ್ಕಾರ ಅಧಿಕೃತವಾಗಿ ಹಸ್ತಾಂತರಿಸಿ, ನ್ಯಾಯಾಲಯದ ಹೆಸರಿಗೆ ಪಹಣಿಯನ್ನೂ ಸಿದ್ಧಪಡಿಸಿರುವುದು ತಾಲೂಕಿನ ವಕೀಲರು ಹಾಗೂ ಕಕ್ಷಿದಾರರಲ್ಲಿ ಸಂತಸ ಮತ್ತು ಸಂಭ್ರಮ ಮೂಡಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹರ್ಷ ವ್ಯಕ್ತಪಡಿಸಿದರು.

ನಗರದ ವಕೀಲರ ಸಂಘದ ಆವರಣದಲ್ಲಿ ನ್ಯಾಯಾಲಯದ ಜಾಗದ ಪಹಣಿಗೆ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಹೊಸಕೋಟೆ ನ್ಯಾಯಾಲಯಕ್ಕೆ ಸ್ವಂತ ಜಾಗ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳಿಂದ ಇಲ್ಲಿನ ವಕೀಲರ ಪ್ರಮುಖ ಬೇಡಿಕೆಯಾಗಿತ್ತು. ಈ ಕನಸನ್ನು ನನಸಾಗಿಸುವಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಕೀಲರ ಸಂಘದ ವತಿಯಿಂದ ಶಾಸಕರನ್ನು ಭೇಟಿ ಮಾಡಿ ನ್ಯಾಯಾಲಯಕ್ಕೆ ಸ್ವಂತ ಜಾಗ ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸಿದಾಗ, ಮೂರು ತಿಂಗಳೊಳಗೆ ನ್ಯಾಯಾಲಯದ ಹೆಸರಿಗೆ ಪಹಣಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದು ನಿಗದಿತ ಅವಧಿಯಲ್ಲೇ ಜಾಗ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ನ್ಯಾಯಾಲಯಕ್ಕೆ ವರ್ಗಾಯಿಸುವ ಪ್ರಸ್ತಾವನೆಗೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿರಲಿಲ್ಲ. ಮರಗಿಡಗಳಿಂದ ಕೂಡಿದ ಸುಂದರ ಪರಿಸರ ಹೊಂದಿರುವ ಜಾಗವನ್ನು ಬಿಟ್ಟುಕೊಡುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಶಾಸಕ ಶರತ್ ಬಚ್ಚೇಗೌಡ ಅವರು ಪ್ರಯತ್ನ ಕೈಬಿಡದೆ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದರು.

ಸರ್ಕಾರಿ ಜಾಗಗಳನ್ನು ಇಲಾಖೆಯಿಂದ ಇಲಾಖೆಗೆ ವರ್ಗಾಯಿಸುವುದು ಸಾಮಾನ್ಯ ಪ್ರಕ್ರಿಯೆಯಲ್ಲ. ಆದರೆ ವಕೀಲರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸರ್ಕಾರದ ಮಟ್ಟದಲ್ಲಿ ಜಾಗವನ್ನು ತೋಟಗಾರಿಕೆ ಇಲಾಖೆ ಹಸ್ತಾಂತರ ಮಾಡಿಸಿಕೊಂಡಿರುವುದು ಉತ್ತಮ ಕೆಲಸವಾಗಿದೆ. ತ್ವರಿತವಾಗಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೂ ಮುಂದಾಗಲಿ ಎಂದರು.

ಬದಲಿ ಜಾಗ ಮಂಜೂರು: ನ್ಯಾಯಾಲಯಕ್ಕೆ ಜಾಗ ನೀಡಿದ ತೋಟಗಾರಿಕೆ ಇಲಾಖೆಗೆ ಜಡಿಗೇನಹಳ್ಳಿ ಹೋಬಳಿ ತವಟಹಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ 4 ಎಕರೆ 20 ಗುಂಟೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ಮೀಸಲಿಡುವುದರ ಜೊತೆಗೆ, ನಿರ್ಮಾಣವಾಗುತ್ತಿರುವ ಪ್ರಜಾಸೌಧದಲ್ಲಿ ಇಲಾಖೆಯ ಕಚೇರಿಗೂ ಸ್ಥಳಾವಕಾಶ ಕಲ್ಪಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ದಂಡುಪಾಳ್ಯ ಗ್ರಾಮದ ಸರ್ವೇ ನಂ.೧೦೯ರಲ್ಲಿನ ಎರಡು ಎಕರೆ ೩೩ ಗುಂಟೆ ಜಾಗವನ್ನು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಸಮ್ಮತಿಸಿದರು.

ನಂತರ ಶಾಸಕರು ಈ ವಿಚಾರವನ್ನು ಸಚಿವ ಸಂಪುಟದ ಗಮನಕ್ಕೆ ತಂದು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದುಕೊಂಡರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದು ಅನುಮೋದನೆ ಪಡೆಯುವಲ್ಲಿ ಶ್ರಮಿಸಿದರು ಎಂದು ರಾಧಾಕೃಷ್ಣ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಆರೀಫ್‌ವುಲ್ಲಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್, ಸಹಾಯಕ ಸರ್ಕಾರಿ ಅಭಿಯೋಜಕಿ ನಿರ್ಮಲಾ ಕುಮಾರಿ, ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾವ್, ಪ್ರಧಾನ ಕಾರ್ಯದರ್ಶಿ ರಾಜಪ್ಪ, ಜಂಟಿ ಕಾರ್ಯದರ್ಶಿ ಟಿ.ಕೆ.ಮುನಿರಾಜು, ಖಜಾಂಚಿ ನಾಗಜ್ಯೋತಿ ಸೇರಿ ವಕೀಲರ ಸಂಘದ ಎಲ್ಲಾ ನಿರ್ದೆಶಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ