ಎಥೆನಾಲ್‌ ಉತ್ಪಾದನೆಯಲ್ಲಿ ಕಾರ್ಮಿಕರ ನಿರ್ಲಕ್ಷಿಸುವಂತಿಲ್ಲ

KannadaprabhaNewsNetwork |  
Published : Nov 20, 2026, 01:45 AM IST
ಕ್ಯಾಪ್ಷನ17ಕೆಡಿವಿಜಿ32 ದಾವಣಗೆರೆ ವಿವಿಯಲ್ಲಿಂದು ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡಾ. ಶರ್ಮಿಳಾ ರುದ್ರಪ್ಪ ಉಪನ್ಯಾಸ ನೀಡಿದರು.  | Kannada Prabha

ಸಾರಾಂಶ

ಕಬ್ಬು ಮತ್ತು ಎಥೆನಾಲ್ ಕೈಗಾರಿಕೆಗಳ ಬೆಳವಣಿಗೆಯ ಹಿಂದೆ ವಲಸೆ ಕಾರ್ಮಿಕರ ಶ್ರಮ, ಜಾತಿ ಆಧಾರಿತ ಅಸಮಾನತೆ ಹಾಗೂ ಆರೋಗ್ಯದ ಸವಾಲುಗಳು ಅಡಗಿವೆ. ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಕೃಷಿ ಕಾರ್ಮಿಕರ ಘನತೆ, ಆರೋಗ್ಯ, ಸುರಕ್ಷತೆ ಮತ್ತು ಹಕ್ಕುಗಳಿಗೂ ಆದ್ಯತೆ ನೀಡಬೇಕು ಎಂದು ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಡಾ.ಶರ್ಮಿಳಾ ರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

- ಚಿಕಾಗೋದ ಇಲಿನಾಯ್ಸ್ ವಿವಿ ಸಮಾಜ ಶಾಸ್ತ್ರ ವಿಭಾಗದ ಡಾ.ಶರ್ಮಿಳಾ ರುದ್ರಪ್ಪ ಉಪನ್ಯಾಸ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಬ್ಬು ಮತ್ತು ಎಥೆನಾಲ್ ಕೈಗಾರಿಕೆಗಳ ಬೆಳವಣಿಗೆಯ ಹಿಂದೆ ವಲಸೆ ಕಾರ್ಮಿಕರ ಶ್ರಮ, ಜಾತಿ ಆಧಾರಿತ ಅಸಮಾನತೆ ಹಾಗೂ ಆರೋಗ್ಯದ ಸವಾಲುಗಳು ಅಡಗಿವೆ. ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಕೃಷಿ ಕಾರ್ಮಿಕರ ಘನತೆ, ಆರೋಗ್ಯ, ಸುರಕ್ಷತೆ ಮತ್ತು ಹಕ್ಕುಗಳಿಗೂ ಆದ್ಯತೆ ನೀಡಬೇಕು ಎಂದು ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಡಾ.ಶರ್ಮಿಳಾ ರುದ್ರಪ್ಪ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಭಾಗಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಾತಿ ಮತ್ತು ಕಬ್ಬು: ದಕ್ಷಿಣ ಭಾರತದಲ್ಲಿ ಕಬ್ಬಿನ ಹೊಲಗಳಿಂದ ಎಥೆನಾಲ್‌ಗೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ದಕ್ಷಿಣ ಭಾರತ, ವಿಶೇಷವಾಗಿ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ, ಕೃಷಿ ಕಾರ್ಮಿಕರ ವಲಸೆ ಹಾಗೂ ಕಬ್ಬು ಮತ್ತು ಎಥೆನಾಲ್ ಕೈಗಾರಿಕೆಗಳ ವಿಸ್ತರಣೆಯ ನಡುವಿನ ಸಂಬಂಧವನ್ನು ತಮ್ಮ ಕ್ಷೇತ್ರ ಅಧ್ಯಯನದ ಆಧಾರದಲ್ಲಿ ವಿವರಿಸಿದರು. ವಲಸೆ ಬಂದ ಕಬ್ಬಿನ ಕಾರ್ಮಿಕರು, ರೈತರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ನಡೆಸಿದ ಸಂವಾದಗಳ ಮೂಲಕ ಸಂಶೋಧನಾ ಸಂಗತಿಗಳನ್ನು ಪ್ರಸ್ತುತಪಡಿಸಿದರು.

ಕಬ್ಬಿನ ಹೊಲಗಳಲ್ಲಿ ದುಡಿಯುವ ವಲಸೆ ಕಾರ್ಮಿಕರು ದೀರ್ಘ ಕೆಲಸದ ಅವಧಿ, ಔದ್ಯೋಗಿಕ ಅಪಾಯಗಳು, ಅಸಮರ್ಪಕ ವಸತಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದರು.

ಎಥೆನಾಲ್ ಅನ್ನು ನವೀಕರಿಸಬಹುದಾದ ಇಂಧನ ಮೂಲವೆಂದು ಪರಿಗಣಿಸಲಾಗುತ್ತಿದ್ದರೂ, ಅದರ ಉತ್ಪಾದನೆಯ ಹಿಂದೆ ಇರುವ ಮಾನವ ಶ್ರಮ, ಕಾರ್ಮಿಕರ ಆರೋಗ್ಯದ ಅಪಾಯಗಳು ಮತ್ತು ಸಾಮಾಜಿಕ ಅಸಮಾನತೆಗಳನ್ನು ನಿರ್ಲಕ್ಷಿಸಬಾರದು. ಸುಸ್ಥಿರ ಅಭಿವೃದ್ಧಿಯೆಂದರೆ ಕೈಗಾರಿಕಾ ಬೆಳವಣಿಗೆ ಮಾತ್ರವಲ್ಲ, ದುಡಿಯುವ ವರ್ಗದ ಹಕ್ಕುಗಳು ಮತ್ತು ಬದುಕಿನ ಭದ್ರತೆಯನ್ನೂ ಖಚಿತಪಡಿಸುವುದಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕುಲಪತಿ ಪ್ರೊ. ಬಿ.ಇ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಇಂದಿಗೂ ಜಾತಿ ಆಧಾರಿತ ಅಸಮಾನತೆಗಳು ವಿವಿಧ ರೂಪಗಳಲ್ಲಿ ಮುಂದುವರಿದಿವೆ. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯ ಸಂದರ್ಭದಲ್ಲಿ ಕಾರ್ಮಿಕರ ಬದುಕು, ಆರೋಗ್ಯ ಮತ್ತು ಹಕ್ಕುಗಳ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಇಂತಹ ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಪ್ರೊ. ಪ್ರದೀಪ್ ಬಿ.ಎಸ್., ಡಾ.ತಿಪ್ಪೇಶ್ ಕೆ., ಡಾ.ಪಟವರ್ಧನ್ ರಾಥೋಡ್, ಪ್ರೊ.ಲೋಕೇಶ್ ಎಂ.ಯು., ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ.ಶಿವಲಿಂಗಪ್ಪ ಬಿ.ಪಿ., ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಆರ್.ಸೆಲ್ವಿ, ಡಾ. ಗಿರೀಶ್ ಡಿ.ಎಚ್., ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿಗಳಾದ ಡಾ. ಕೆ.ಜ್ಯೋತಿ, ಡಾ. ಗೌತಮ್ ಸೇರಿದಂತೆ ಎಲ್ಲ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

- - -

-17ಕೆಡಿವಿಜಿ32:

ಕಾರ್ಯಕ್ರಮದಲ್ಲಿ ಇಲಿನಾಯ್ಸ್ ವಿ.ವಿ.ಯ ಡಾ. ಶರ್ಮಿಳಾ ರುದ್ರಪ್ಪ ಉಪನ್ಯಾಸ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ