ಹೆಚ್ಚುತ್ತಿದೆ ಬಿಡಾಡಿ ದನಗಳ ಕಾಟ

KannadaprabhaNewsNetwork |  
Published : Sep 22, 2025, 01:03 AM IST
ನಗರದಲ್ಲಿ ಬಿಡಾಡಿ ದನಗಳ ಕಾಟ ದಿನೆ ದಿನೆ ಹೆಚ್ಚುತ್ತಿದೆ | Kannada Prabha

ಸಾರಾಂಶ

ನಗರದಲ್ಲಿ ಬಿಡಾಡಿ ದನಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆ.

ಪ್ರಮೋದ ಗಡಕರ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆ ಬೆಳಗಾವಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಅದಕ್ಕೆ ತಕ್ಕುದಾದ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ, ನಗರದಲ್ಲಿ ಬಿಡಾಡಿ ದನಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಬಿಡಾಡಿ ದನಗಳ ಕಾಟದಿಂದ ನಮ್ಮನ್ನು ತಪ್ಪಿಸುವಂತೆ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಆಗ್ರಹಿಸುತ್ತಿದ್ದಾರೆ.

ನಗರದ ಬಸ್ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ರಸ್ತೆ ಮಧ್ಯದಲ್ಲೆ ಬಿಡಾಡಿ ದನಗಳು ರಾಜಾರೋಷವಾಗಿ ಓಡಾಡುತ್ತಿವೆ. ಅವು ಅಡ್ಡಾದಿಡ್ಡಿ ಓಡಾಡುವುದರಿಂದ ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ಇನ್ನು ಆ ದನಗಳಿಗೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ಅದೇಷ್ಟೊ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.

ಕೆಲವು ರಸ್ತೆಗಳಲ್ಲಿ ಬಿಡಾಡಿ ದನಗಳು ಅಡ್ಡಾದಿಡ್ಡಿ ಓಡಾಡುವುದು, ಇನ್ನೂ ಕೆಲವು ರಸ್ತೆಗಳ ಮಧ್ಯೆಯೇ ಮಲಗುತ್ತವೆ. ಒಂದು ಕಡೆ ವಾಹನಗಳು ಸಂಚರಿಸಲು ದಾರಿಯೇ ಇರುವುದಿಲ್ಲ. ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೂ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ಅಲ್ಲದೇ ನಗರದ ಬಸ್ ನಿಲ್ದಾಣಗಳನ್ನೆ ಅಡ್ಡೆ ಮಾಡಿಕೊಂಡಿರುವ ಆ ದನಗಳು ಅಲ್ಲಿಯೇ ಮಲಗುತ್ತವೆ. ಇದರಿಂದ ಸಾರ್ವಜನಿಕರು ಹೆದರಿ ಬಸ್ ನಿಲ್ದಾಣದಿಂದ ದೂರವೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೇ ಸೆಗಣಿ ಹಾಕುವುದರಿಂದ ತಂಗುದಾನಗಳು ಗಬ್ಬೆದ್ದು ನಾರುತ್ತಿವೆ.

ಇನ್ನು ದಿನ ನಿತ್ಯ ನೂರಾರು ಬಿಡಾಡಿ ದನಗಳು ನಗರದಲ್ಲಿ ಹಿಂಡು ಕಟ್ಟಿಕೊಂಡು ಓಡಾಡುತ್ತಿವೆ. ಇವುಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮಹಾನಗರ ಪಾಲಿಕೆಯ ಸೂಚನೆ ಮೇರೆಗೆ ವಿನಾಯಕ ವಿದ್ಯಾವರ್ಧಕ ಸಂಘ ಮರಕಟ್ಟಿ ವತಿಯಿಂದ ಈವರೆಗೆ‌ ಒಟ್ಟು 65 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಜನರಿಗೆ ತೊಂದರೆ ಕೊಡುತ್ತಿರುವ ಬಿಡಾಡಿ ದನಗಳ ಕಾಟ ಹೆಚ್ಚಾಗದಂತೆ ಕ್ರಮ ವಹಿಸುವಂತೆ ನಾಗರಿಕರು ಅಧಿಕಾರಗಳಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗಿದೆ. ಬಿಡಾಡಿ ದನಗಳ ಹಿಡಿದು ಗೋಶಾಲೆಗೆ ರವಾನಿಸಲಾಗುತ್ತಿದೆ. ಈಗಾಗಲೇ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಖಾಸಗಿ ಎನ್‌ಜಿಓ ಸಂಸ್ಥೆ ಮುಂದೆ ಬಂದಿದೆ. 1 ಜಾನುವಾರು ಹಿಡಿದರೆ ಪಾಲಿಕೆಯಿಂದ ಅವರಿಗೆ ₹1 ಸಾವಿರ ನೀಡುತ್ತಿದ್ದೇವೆ. ಒಂದಿಷ್ಟು ಮಾಲೀಕರು ಉದ್ದೇಶಪೂರ್ವಕವಾಗಿಯೇ ದನಗಳನ್ನು ಹೊರಗೆ ಓಡಾಡಲು ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಶುಭ ಭಿ, ಆಯುಕ್ತೆ, ಮಹಾನಗರ ಪಾಲಿಕೆ ಬೆಳಗಾವಿ

ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಬೀದಿಯಲ್ಲಿ ಬಿಡಾಡಿ ದನಗಳ ಹಾವಳಿ ಜೋರಾಗಿದೆ. ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಬಿಡಾಡಿ ದನಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು.

ರಮೇಶ ಪಾಟೀಲ, ಸ್ಥಳೀಯ ನಿವಾಸಿ

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ