ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಿ

KannadaprabhaNewsNetwork |  
Published : Sep 22, 2025, 01:03 AM IST
ಬೆಳಗಾವಿ | Kannada Prabha

ಸಾರಾಂಶ

ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಅಪರಿಚಿತ ವ್ಯಕ್ತಿಯೊಂದಿಗೆ ಯಾವುದೇ ನಮ್ಮ ವೈಯಕ್ತಿಕ ಮೊಬೈಲ್‌ಗಳನ್ನು ಬಳಕೆಗೆ ಕೊಡುವಂತಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಪ್ರಸ್ತುತ ದಿನಮಾನಗಳಲ್ಲಿ ನಾವು ಮೊಬೈಲ್‌ಗಳ ಗೀಳಿಗೆ ಒಳಗಾಗಿ ಹಲವಾರು ಸಮಾಜ ವಿರೋಧಿ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲದೆ ಇನ್ನೊಬ್ಬರ ಮೋಸದ ಜಾಲಕ್ಕೆ ಒಳಗಾಗಿ ಹಲವಾರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ ಎಂದು ಬೆಳಗಾವಿ ಜಿಲ್ಲಾ ಸೈಬರ್ ಕ್ರೈಂ ಬ್ರ್ಯಾಂಚ್‌ ಅಧಿಕಾರಿ ಸಿಇಎನ್ ಸಪ್ತ ಸಾಗರ್ ಹೇಳಿದರು.

ತಾಲೂಕಿನ ಕೆರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಸೈಬರ್ ಕ್ರೈಂ ಜಾಗೃತಿ ತಂಡ ಚಿಕ್ಕೋಡಿ ಸಯುಕ್ತ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸೈಬರ್ ಕ್ರೈಂ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಅಪರಿಚಿತ ವ್ಯಕ್ತಿಯೊಂದಿಗೆ ಯಾವುದೇ ನಮ್ಮ ವೈಯಕ್ತಿಕ ಮೊಬೈಲ್‌ಗಳನ್ನು ಬಳಕೆಗೆ ಕೊಡುವಂತಿಲ್ಲ ಎಂದು ತಿಳಿಸಿದರು.

ಚಿಕ್ಕೋಡಿಯ ಸೈಬರ್ ಕ್ರೈಂ ಅರಿವು ತಂಡದ ಸದಸ್ಯ ಆನಂದ್ ಮಾಳಿ ಮತ್ತು ಅಮಿತ್ ಮಾಳಿ ಅವರು ವಿದ್ಯಾರ್ಥಿಗಳಿಗೆ ಹಲವಾರು ವಿಡಿಯೋ, ಫೋಟೋ ಮತ್ತು ಪತ್ರಿಕೆಗಳಲ್ಲಿ ಬಂದಿರುವ ಈ ಮೋಸದ ಜಾಲದ ಬಗ್ಗೆ ಉದಾಹರಣೆಗಳೊಂದಿಗೆ ತಿಳಿಹೇಳಿದರು. ಇಂದು ಶಿಕ್ಷಿತರೇ ಹೆಚ್ಚಿನ ಪ್ರಮಾಣದಲ್ಲಿ ಈ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಹಣ ದ್ವಿಗುಣ ಗೊಳಿಸಿಕೊಳ್ಳುವ ಮತ್ತು ವಾಟ್ಸಾಪ್‌ದಲ್ಲಿ ಬರುವ ಮತ್ತು ಫೇಸ್ಬುಕ್, ಇನ್ಸಟಾಗ್ರಾಂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಪಿಕೆ ಫೈಲ್‌ಗಳನ್ನು ಬಳಸುವುದು ಮತ್ತು ಲಿಂಕಗಳನ್ನು ಒತ್ತುವುದರ ಮೂಲಕ, ಅಪರಿಚಿತ ವ್ಯಕ್ತಿಯೊಂದಿಗೆ ಓಟಿಪಿಗಳನ್ನು ಹಂಚಿಕೊಳ್ಳುವುದರ ಮೂಲಕ ಕ್ಷಣಾರ್ಧದಲ್ಲಿಯೇ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಾಯವಾಗುತ್ತಿರುವುದರ ಒಳಸುಳುವಿನ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಕೋಲಾರ್ ಮಾತನಾಡಿ, ಇಂದು ಈ ಸೈಬರ್ ಮೋಸಕ್ಕೆ ಅತಿ ಹೆಚ್ಚು ಜನರು ಶ್ರೀಮಂತರು, ಉದ್ಯಮಿಗಳು, ಅತಿ ಹೆಚ್ಚು ಶಿಕ್ಷಿತರಾದ ಜನರೇ ಬಲಿಯಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಅತಿ ಶೀಘ್ರದಲ್ಲಿಯೇ ಹಣ ಗಳಿಸಬೇಕ ಎಂಬ ಧಾವಂತದಲ್ಲಿ ತಾವು ಮೋಸಕ್ಕೆ ಒಳಗಾಗುತ್ತಿದ್ದೇವೆ ಎಂಬುವುದರ ಅರಿವು ಅವರಿಗೆ ಇಂದು ಆಗುತ್ತಿಲ್ಲ. ಸೈಬರ್‌ ಕಳ್ಳರು ಹೇಳುವ ಮೃದು ಮಾತಿಗೆ ಮನಸೋತು ಅಥವಾ ಬೆದರಿಕೆಗೆ ಅಂಜಿ ಅವರು ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡಿ ಕ್ಷಣದಲ್ಲಿಯೇ ತಮ್ಮ ಖಾತೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಫೇಸ್ಬುಕ್‌ಗೆ ಮತ್ತು ವಾಟ್ಸಾಪ್‌ಗೆ ಸ್ಟೇಟಸ್ ಹಾಕುವಾಗ ಜಾಗೃತಿ ವಹಿಸಬೇಕು. ನಮ್ಮೆಲ್ಲರ ಮಾಹಿತಿ ಇಂದು ಮೊಬೈಲ್ ಕಂಪನಿಯವರ ಕೈಯಲ್ಲಿ ಇದೆ. ಅದಕ್ಕಾಗಿ ನಮ್ಮ ಹಣಕಾಸಿಗೆ ಸಂಬಂಧಪಟ್ಟಂತೆ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ವಿಷಯಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದರು.

ಈ ವೇಳೆ ಚಿಕ್ಕೋಡಿಯ ಸಿಪಿಐ ವಿಶ್ವನಾಥ್ ಚೌಗಲಾ ಇದ್ದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶಂಕರ್ ತೇಲಿ ಸ್ವಾಗತಿಸಿ, ಕವಿತಾ ಮಲಬಣ್ಣವರ್ ನಿರೂಪಿಸಿ, ಸ್ವಯಂ ಸೇವಿಕಿ ಅಪೂರ್ವ ಹಕ್ಯಾಗೋಳ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಅನಿಲ್ ಬಾನೆ, ಸಂಜು ಮಾನೆ ಹಾಗೂ ಇತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ