ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಜಾತಿ, ಮತ, ಪಂಥ, ವರ್ಣ, ಲಿಂಗಗಳ ಸಂಕೋಲೆಯನ್ನು ಮೀರುವ ಸಂದೇಶವಿದ್ದು, ಅದನ್ನು ಅರಿತು ನಾವು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್ ಹೇಳಿದರು.
ಸಂಸ್ಕೃತಿ ಚಿಂತಕ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕುವೆಂಪು ಮತವೆಂಬ ಮೋಹಕ್ಕೆ ಸಿಲುಕಬಾರದು. ಇರುವುದೊಂದೇ ಮತ, ಅದುವೇ ಮನುಜ ಮತ. ಎಲ್ಲರೂ ಮನುಜ ಮತಕ್ಕೆ ಸೇರಬೇಕು. ಜನರು ತಮ್ಮನ್ನು ಆವರಿಸಿರುವ ಮೌಢ್ಯದಿಂದ ಹೊರಬಂದು, ಸಮಾನವಾಗಿ ಬದುಕುಬೇಕು ಎನ್ನುವ ಮೂಲಕ ಸಮಾಜದಲ್ಲಿ ವೈಚಾರಿಕತೆಯ ಬೀಜ ಬಿತ್ತಲು ಶ್ರಮಿಸಿದರು ಎಂದು ಬಣ್ಣಿಸಿದರು.
ಜನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಮಾತನಾಡಿ, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು. ಜಾತಿ, ಧರ್ಮದಿಂದಲ್ಲ. ಅಂತರಾತ್ಮದಲ್ಲಿ ಜ್ಞಾನ ದೀವಿಗೆ ಬೆಳಗಿಸಿ ವಿಶ್ವ ಮಾನವನಾಗಬೇಕು ಎಂದು ಜಗತ್ತಿಗೆ ಸಾರಿದ ಮೇರು ಕವಿ ಕುವೆಂಪು ಎಂದರು.ಸಮಾಜಮುಖಿ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ನಿವೃತ್ತ ಸೈನಿಕರು ಹಾಗೂ ರೈತಪರ ಹೋರಾಟಗಾರರನ್ನು ಗೌರವಿಸಲಾಯಿತು. ಭಾರತ ಸಂವಿಧಾನ ಬಳಗದ ಮತ್ತೀಕೆರೆ ಹನುಮಂತಯ್ಯ, ತಹಸೀಲ್ದಾರ್ ಎ.ಎಚ್.ಮಹೇಂದ್ರ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಡಾ.ರಾಜಶ್ರೀ, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಉಪಸ್ಥಿತರಿದ್ದರು.