ಉಡುಪಿ ಜಿಲ್ಲಾಸ್ಪತ್ರೆಗೆ ಸಚಿವೆ ಶೋಭಾ ಧಿಡೀರ್ ಭೇಟಿ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ಸ್‌ ಅವ್ಯವಸ್ಥೆಗೆ ಸಚಿವೆ ಶೋಭಾ ಗರಂ
ಕನ್ನಡಪ್ರಭ ವಾರ್ತೆ ಉಡುಪಿ ಉಡುಪಿಯ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಶನಿವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿರುವ 11 ಡಯಾಲಿಸೀಸ್ ಯಂತ್ರಗಳು ಹಾಳಾಗಿ ಸ್ಥಗಿತಗೊಂಡಿವೆ, ಇಲ್ಲಿ ಚಿಕಿತ್ಸೆ ಸಿಗದೆ ಬಡ ರೋಗಿಗಳು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೂ ರಾಜ್ಯದ ಆರೋಗ್ಯ ಇಲಾಖೆಯ ಆಯುಕ್ತರು ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ರಾಜ್ಯದಲ್ಲಿ 122 ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಸೇವೆಯ ಗುತ್ತಿಗೆ ಪಡೆದಿರುವ ಎಸ್.ಕೆ. ಸಂಜೀವಿನಿ ಎಂಬ ಖಾಸಗಿ ಸಂಸ್ಥೆಯು ಅಕ್ಟೋಬರ್ 1 ರಿಂದಲೇ ತನ್ನ ಸೇವೆಯನ್ನು ನಿಲ್ಲಿಸುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೂ ಸರಕಾರ ಪರ್ಯಾಯ ವ್ಯವಸ್ಥೆ ಮಾಡಿಲ್ಲ, ಹೊಸ ಯಂತ್ರಗಳನ್ನು ನೀಡಿಲ್ಲ, ಹಾಳಾದ ಯಂತ್ರಗಳನ್ನು ರಿಪೇರಿ ಮಾಡಿಸಿಲ್ಲ, ಬಡವರಿಗೆ ಆರೋಗ್ಯ ಸೇವೆ ನೀಡುತ್ತಿಲ್ಲ. ಬೇಜವಾಬ್ದಾರಿ ಸರ್ಕಾರ ತನ್ನೊಳಗೆ ಕಿತ್ತಾಡುವುದರಲ್ಲಿಯೇ ತಲ್ಲೀನವಾಗಿದೆ. ಬಡವರಿಗೆ ಆರೋಗ್ಯ ಸೇವೆ ನೀಡಲಿಕ್ಕಾಗದಷ್ಟೂ ಸರ್ಕಾರ ನಾಲ್ಕೇ ತಿಂಗಳಲ್ಲಿ ದಿವಾಳಿಯಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿಲ್ಲ ? ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯಾ, ಬಡವರ ಗೋಳು ಕೇಳುತ್ತಿಲ್ಲವೇ ? ಎಂದವರು ಖಾರವಾಗಿ ಪ್ರಶ್ನಿಸಿದರು. ಸಹಾಯಕ್ಕೆ ಕೇಂದ್ರ ಸಿದ್ಧವಿದೆ: ಪ್ರತಿಯೊಬ್ಬ ರೋಗಿಯ ವೆಚ್ಚವನ್ನು ಖಾಸಗಿ ವ್ಯಕ್ತಿಗಳು, ಶಾಸಕರು ಭರಿಸುವುದಕ್ಕಾಗುವುದಿಲ್ಲ, ಸರ್ಕಾರವೇ ಭರಿಸಬೇಕು. ರಾಜ್ಯದ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿದರೆ, ಖಂಡಿತಾ ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧವಿದೆ. ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು. ಸಚಿವೆಯೊಂದಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಸಂಧ್ಯಾ ರಮೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಉಡುಪಿಯ ಡಯಾಲಿಸೀಸ್ ಕೇಂದ್ರದಲ್ಲಿ ಕಳೆದೆರಡು ತಿಂಗಳಿಂದ ಈ ಸಮಸ್ಯೆಗಳ ಬಗ್ಗೆ ಜಿಲ್ಲಾ ಸರ್ಜನ್ ಡಾ. ವೀಣಾ ಅವರಿಂದ ಮಾಹಿತಿ ಪಡೆದ ಸಚಿವೆ, ಸ್ಥಳದಿಂದಲೇ ರಾಜ್ಯ ಆರೋಗ್ಯ ಇಲಾಖೆಯ ಕಮಿಷನರ್‌ಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದರು. ಆದರೆ ಡಯಾಲಿಸೀಸ್ ಯಂತ್ರಗಳು ಸಂಪೂರ್ಣ ಸ್ಥಗಿತವಾಗಿರುವ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿ ಉತ್ತರಿಸಿದರು. ಈ ಬಗ್ಗೆ ಸಚಿವೆ ಅಚ್ಚರಿ ವ್ಯಕ್ತಪಡಿಸಿದರು.

Share this article